EN | KA

Aparājitēśvara Śatakaṃ

ಶ್ರೀಕುಲಮಾಪ್ತಗೋತ್ರಮಮಲಾಂಗಮತಂದ್ರತೆ ಸಮ್ಯಗಾಯು ವಿ
ದ್ಯಾಕುಶಲತ್ವಮಾದೊಡಮಿದೆನ್ನದಿದನ್ಯಮೆನುತ್ತೆ ಕಂಡು ನಿ
ರ್ವ್ಯಾಕುಲನಾಗಿ ಯೆಲ್ಲರಿನಗಲ್ದು ಮಣಿತ್ರಯಸಂಪದಕ್ಕೆ ರ
ತ್ನಾಕರನಾದವಂ ತವ ಕೃಪಾತ್ಮನಲಾ! ಅಪರಾಜಿತೇಶ್ವರಾ!

ನಂಬುವುದೇಳು ತತ್ತ್ವಮನದುತ್ತಮದೃಷ್ಟಿ ತದರ್ಥಮಂ ನಯಾ
ರ್ಥಂ ಬರೆ ನೋಡಿ ಭೇದಿಪುದದುತ್ತಮಬೋಧಮಹಿಂಸೆಯಲ್ಲಿ ಮಾ
ರ್ಗ ಬಿಡದಿರ್ಪುದುತ್ತಮಚರಿತ್ರಮಿವಿಂತು ಮಣಿತ್ರಯಂ ತದೀ
ಯಾಂಬುಧಿ ಯಾವುದುತ್ತಮತಪಂಗಳಲಾ! ಅಪರಾಜಿತೇಶ್ವರಾ!

ಮೂಜಗವೆಂಬ ಗೇಹದೊಳೆ ತುಂಬಿದ ವಸ್ತುಗಳಾರು ಕಾಯವೈ
ದೋಜೆಯ ತತ್ತ್ವವೇಳು ನವಭೇದಪದಾರ್ಥಮಿವಂ ತಪಸ್ವಿ ಸಂ
ಯೋಜಿಸಿ ಕೂಡೆಕೂಡೆ ಪರಿಭಾವಿಸಿ ತನ್ನನೆ ಕಾಣ್ಬುದರ್ಕೆ ಚೇ
ತೋಜಯನಾಗಬೇಕು ಮೊದಲೆಂದೆಯಲಾ! ಅಪರಾಜೀತೇಶ್ವರಾ!

ಬಳಿಕಣುಪೆಕ್ಕೆ ಪನ್ನೆರಡರಲ್ಲಿ ಚತುಷ್ಕದ ದಮ್ಮಜಾನದೊಳ್
ಸುಳಿಸುಳಿದಾಡಿ ಕೂಡೆ ಗುರುಪಂಚಕದೊಳ್ಪೊಳೆದಾಡಿ ಚಿತ್ತದ
ಗ್ಗಳಮನಡಂಗಿಸುತ್ತೊಡನೆ ತನ್ನಯ ದೇಹದೊಳಾತ್ಮನಲ್ಲಿ ನಿಂ
ದಳಲಳಿದಿರ್ದವಂ ತವ ಕೃಪಾತ್ಮನಲಾ! ಅಪರಾಜಿತೇಶ್ವರಾ!

ಆ ಪದದೊಳ್ ಕ್ಷಣಕ್ಷಣಕೆ ಕರ್ಮಸಮೂಹಕೆ ಹಾನಿ ಸದ್ಗುಣೋ
ದೀಪಿಕೆಯಪ್ಪುದೋದಿನ ಪರಿಶ್ರಮಮುಂ ತಪದುಬ್ಬೆಯುಂ ಸುಧಾ
ರೂಪಮನೆಯ್ದುತಿರ್ಕುಮದರಿಂದದನೇ ಸಕಲ ಪ್ರಯತ್ನದಿಂ
ಸ್ಥಾಪಿಸಿ ಮುಕ್ತಿಯಂ ಪಡೆವುದೆಂದೆಯಲಾ! ಅಪರಾಜಿತೇಶ್ವರಾ!

ಅದು ಲಘುಕರ್ಮಿಗಾತ್ಮತನುಭೇದವಿಚಾರದೊಳಳ್ತಿಯುಳ್ಳವಂ
ಗುದಯಿಪುದಲ್ಲದೇ ಸಕಲಶಾಸ್ತ್ರಮನೋದಿದೊಡಂ ತಪಂಗಳೊ
ಳ್ಳುದಿದೊಡಮಾಗದಂತದರಿನಾ ರುಚಿಯುಳ್ಳವನೇ ಭವತ್ಪ್ರಸಾ
ದದ ಸುಖಯೆಂದು ಮೆಚ್ಚಿ ಪರಿಕೀರ್ತಿಪೆನಾನಪರಾಜಿತೇಶ್ವರಾ!

ಭೇದ ವಿಚಾರಮೆಂತೊ ತನುಮೂರವರಲ್ಲಿಯೆ ಕರ್ಮವೆಂಟಿವೇ!
ವೇದನೆಗಿಂಬುಗಳ್ಕಡೆಗಚೇತನರೂಪಿಗಳಾತ್ಮನಿಲ್ಲಿ ಮಿ
ತ್ರೋದಯನಾಗಿ ಬಾಳ್ದಪನವಂ ಸುಖಿ ಚಿನ್ಮಯನೆಂದು ಬುದ್ಧಿಯಿಂ
ಭೇದಿಸಿ ಬೇರುಗೆಯ್ದೊಳಗೆ ನೋಳ್ಪುದಲಾ! ಅಪರಾಜಿತೇಶ್ವರಾ!

ಪೊರಗಿದು ಧಾತುರೂಪದೊಡಲಿನ್ನೆರಡುಂಟೊಳಗೊಂದು ತೇಜದಿಂ
ತುರುಗಿದ ತೈಜಸಾಂಗಮೊಡನಷ್ಟಮಲಾ ಶ್ರಿತಕಾರ್ಮಣಾಂಗಮೊಂ
ದುರೆ ಪೆಸರಿಂದೆ ಬೇರ್ಪಡಿಸಬರ್ಪುದು ರೂಪದೆ ಮಿಶ್ರಿತಂಗಳೀ
ಸೆರೆಮನೆ ಮೂರರೊಳ್ಪುದಿದನಾತ್ಮನಹೋ! ಅಪರಾಜಿತೇಶ್ವರಾ!

ಆಗುತ ಪೋಗುತಿರ್ಪುದಿದು ಬಾಹ್ಯಶರೀರಮನೇಕರೂಪದಿಂ
ಯೋಗವಿಯೋಗಿಯಪ್ಪ ಪದಿನಾಲ್ಕು ಗುಣಸ್ಥಲಕಾಲಕಲ್ಲದೆ
ಪೋಗದು ತೈಜಸಂ ಪುದಿದ ಕಾರ್ಮಣಮುಂ ಸಲೆ ಭೇದಭಾವನೋ
ದ್ಯೋಗಮನಿಂದುತೊಟ್ಟಸಗವೇಳ್ಕುಮದರ್ಕಪರಾಜಿತೇಶ್ವರಾ!

ಕಳೆದು ಸಮಸ್ತಬಾಹ್ಯರತಿಯಂ ಮನದುತ್ಸವದಿಂದೆ ಗೂಢಸು
ಸ್ಥಳದೊಳಗಿರ್ದು ತನ್ನೊಳಗೆ ತನ್ನಯ ರೂಪನೆ ನಿಮ್ಮ ರೂಪಿನಾ
ಪಳುಕಿನ ಬೊಂಬೆಯಂದವೆನುತುಂ ನೆನೆದೀಕ್ಷಿಸುವಂಗೆ ಚಿತ್ತದೊಳ್
ಪೊಳೆಯದೆ ಮಾಣ್ಬುದೇ ಪರಮಸಿದ್ಧನ ರೂಪಪರಾಜಿತೇಶ್ವರಾ!

೧೦

ತನು ಜಿನಗೇಹವೆಂಬುದೊಳಗಿರ್ದು ನಿಜಾತ್ಮನೆ ದೇವನೆಂಬುದಾ
ತನುಪರಿಮಾಣನೆಂಬುದ ಶರೀರಕನೆಂಬುದು ಬೋಧದರ್ಶನಂ
ತನುವೆನಿಸಿರ್ದನೆಂಬುದಕಲಂಕನಬಾಧನಖಂಡನೆಂಬ ಭಾ
ವನೆಯನೆ ಭಾವಿಸುತ್ತಿರೆ ಭವಚ್ಯುತಿ ತಾನಪರಾಜಿತೇಶ್ವರಾ!

೧೧

ಮೊದ ಮೊದಲಾಸರಪ್ಪುದೊಡನೊಪ್ಪಿರೆ ಸಂತವಪ್ಪುದಂತು ಮಾ
ಣದೆ ಪರಿಭಾವಿಸುತ್ತಿರೆ ಮಹಾಸುಖಮಪ್ಪುದು ಬಾಹ್ಯದಾಟದೊಳ್
ಬೆದರಿಕೆಯಪ್ಪುದಾತ್ಮನೊಳೆ ಮೆಚ್ಚುಗೆಯಪ್ಪುದು ಲೋಕಮೆಲ್ಲ ಮಾ
ಯದ ಮರುಳಾಗಿ ತೋರ್ಪುದು ನಿಜಾತ್ಮರತಂಗಪರಾಜಿತೇಶ್ವರಾ!

೧೨

ನುಡಿ ಕಿರಿದಪ್ಪುದೂಟದೊಳರೋಚಕಮಪ್ಪುದು ಬಾಹ್ಯಗೋಷ್ಠಿಯೊಳ್!
ಸಿಡಿಮಿಡಿಯಪ್ಪುದಂತೆ ಬಹಿರಂಗದ ನೋಟಕೆ ಕಣ್ಗೊಳೊಲ್ಲವಾ
ಕಡುಪಿನ ಕಾಲ್ಗಳಾಟವಡಕಕ್ಕೊಳಗಪ್ಪುದು ಬುದ್ಧಿ ಮುಕ್ತಿಯಂ
ತುಡುಕುತಮಿರ್ಪುದಲ್ತೆ ಪರಮಾತ್ಮರತಂಗಪರಾಜಿತೇಶ್ವರಾ!

೧೩

ಪೊರಗೆ ತಪಂಗಳಾರರ ಸಹಾಯತೆ ಬೇಕು ಶರೀರ ಮೋಹಮಂ
ತೊರೆಯಲೆ ಬೇಕು ಭಾವನೆಯ ಶಾಸ್ತ್ರ ವಿಲೋಕಿತೆ ಬೇಕು ನಿಚ್ಚಲುಂ
ನೆರೆವ ವಿರಕ್ತಿ ಬೇಕು ರಿಪುಬಂಧುಗಳೊಳ್ಸರಿಗಾಣಬೇಕು ಕ
ಣ್ಣರಿದು ನಿಜಾತ್ಮನಂ ಚಲಿಸದೀಕ್ಷಿಸುವಂಗಪರಾಜಿತೇಶ್ವರಾ!

೧೪

ಮೆಯ್ಯೊಳಗೆನ್ನೆಗಂ ಮಮತೆಯಂಟವನನ್ನೆ ಗಮುಗ್ರ ಕಾಲನಾ
ಕೆಯ್ಯೊಳಗಿರ್ದ ಪಕ್ಕಿ ವಿಷಯಂಗಳ ಮೆಚ್ಚಿದವಂ ವಿಷಾಗ್ನಿಯೊಳ್
ಚುಯ್ಯನೆ ಬೆಂದವಂ ಬಹುಕಷಾಯಮನೊತ್ತಿ ಕಳಲ್ಜದಾತನ
ಯ್ಯಯ್ಯೊ!ಮುಳುಂಗಿದಂ ನರಕದೊಳ್ಪಲವೇನಪರಾಜಿತೇಶ್ವರಾ!

೧೫

ತನುಪಗೆಯೆಂಬವಂ ವ್ರತಯುತಂ ವಿಷಯಂ ವಿಷವೆಂದು ಬಿಟ್ಟವಂ
ವಿನುತತಪಸ್ವಿ ಕೋಪವಿಡಿದಿರ್ದ ಕಷಾಯಕೆ ದೂರನಾದ ಶಾಂ
ತನೆ ಸಕಲಾತ್ಮರಕ್ಷಕನಿನಿತುಂ ಗುಣಸಂತತಿಗೂಡಿ ತತ್ತ್ವ ಭಾ
ವನೆಯೊಳೆ ಬಾಳ್ವನೇ ಶಿವನವಂಗೆಣೆಯಾರಪರಾಜಿತೇಶ್ವರಾ!

೧೬

ಉಂಬನಿತರ್ಕೆ ಕೊಟ್ಟು ಪಗೆಯೊಳ್ಪವುಂ ತೆರದಿಂದೆ ಸೇವೆಯಂ
ಕೊಂಬ ವಿವೇಕಿಯಂತೆ ವಿರಸಾನ್ನಮನೇ ತನುವಿಂಗೆ ಜೋಕೆಯಿಂ
ತುಂಬಿ ಜಪಂ ತಪಂ ಪರಮಶಾಸ್ತ್ರ ರಹಸ್ಯದೊಳಾತ್ಮ ಕಾರ್ಯಮಂ
ಬೆಂಬಿಡದಾವಗಂ ನೆಗಳ್ವವಂಗೆಣೆಯಾರಪರಾಜಿತೇಶ್ವರಾ!

೧೭

ಉಂಬುದು ನೀರಸಂ ಪೊರೆವುದೊಂದೊಡಲಿರ್ಪುದು ಗೂಢವಾಸವಾ
ಡುಂಬೊಲನೇಳುತತ್ತ್ವ ಮೊಳುವಾತು ಸರಸ್ವತಿಯೊಳ್ನಿರಂತರಂ
ಹಂಬಲಘಪ್ರಣಾಶದೊಳಗೀಕ್ಷಣಮಾತ್ಮನೊಳಾಗಿ ಬಾಳ್ವಧೀ
ರಂ ಬಹುಕರ್ಮಮಂ ಕ್ಷಣಕೆ ಖಂಡಿಸನೇ! ಅಪರಾಜಿತೇಶ್ವರಾ!

೧೮

ತನ್ನೊಳೆ ತನ್ನ ನೋಳ್ಪ ಋಷಿಗನ್ಯರ ನೋಟಮದೇಕೆ ಚಿದ್ಗುಣೋ
ತ್ಪನ್ನ ಸುಧಾನ್ನಮುಣ್ಬ ಮುನಿಗೊಳ್ಳುಣಿಸೆಂಬ ವಿವಕ್ಷೆಯೇಕೆ ಸಿ
ದ್ಧಂ ನಮ ಎಂಬ ವಾಕ್ಯಮಿರೆ ಬೇರ್ನುಡಿಯೇಕೆ ನಿಜಾತ್ಮರೂಪದೊಳ್
ನಿನ್ನೊಡನಾಡುವಂಗುಳಿದ ಗೋಷ್ಠಿಗಳೇಕಪರಾಜಿತೇಶ್ವರಾ!

೧೯

ಬಿಡದೆ ಕಷಾಯಮಂ ಸುಡದೆ ಯಿಂದ್ರಿಯತೃಷ್ಣೆಗಳಂ ಪರೀಷಹ
ಕ್ಕೊಡನಿದಿರಾಗಿ ಗೆಲ್ಲದೆ ಸುಗುಪ್ತಿಗಳು ಪುಗದಾತ್ಮನಂ ಮಲಂ
ಬಿಡಿದೊಡಲಿಂದೆ ಬೇರ್ಪಡಿಸಿ ನೋಡದೆ ಸುಮ್ಮನೆ ಕರ್ಮಶತ್ರುವೇ
ಬಿಡು ಬಿಡು ಪೋಗೆನಲ್ನುಡಿಗೆ ಪೋದಪುದೇ! ಅಪರಾಜಿತೇಶ್ವರಾ !

೨೦

ಪುರುಪರಮೇಶನಾದಿಯೆನೆ ತೀರ್ಥಕರರ್ಮೊದಲಾಗಿ ಕಾನನಾಂ
ತರದೊಳಗದ್ರಿಯೊಳ್ ಚಳಿಯೊಳಾತಪದೊಳ್ಮಳೆಯೊಳ್ ಕ್ಷುಧಾತೃಷಾ
ಭರಮನಡರ್ತು ಗೆಲ್ಲದೆ ಜಿನೇಶ್ವರರಾದರೆ ಕೋಡಿ ಬಾಡಿ ಜೋ
ಕರಿಪೆನಗೆತ್ತ ನಿರ್ಜರೆಯ ಮಾತು ಜಡಂಗಪರಾಜಿತೇಶ್ವರಾ!

೨೧

ಓದಿದ ತತ್ತ್ವ ಮಿಲ್ಲ ಪರಿದಿಟ್ಟ ಪರಿಗ್ರಹಮಿಲ್ಲ ತಗ್ಗಿತಂ
ಪಾದ ಕಷಾಯಮಿಲ್ಲ ನೆರೆ ಗೆಲ್ಲ ಪರೀಷಹಮಿಲ್ಲ ಸದ್ಗುಣಾ
ಮೋದತೆಯಿಲ್ಲ ಮಾಡಿದುರು ಧರ್ಮವಿಕಾಸತೆಯಿಲ್ಲ ನಿಮ್ಮೊಳ
ತ್ಯಾದರಭಕ್ತಿಯಿಲ್ಲ ಸುಖಿಯಾಗುವೆನೆಂತಪರಾಜಿತೇಶ್ವರಾ!

೨೨

ಬೋಧಿಪೆನೆಂಬೆಲ್ಲರುಮನಾಗಮಪದ್ಧತಿ ಬಾರದಾಯ್ತು ಬ
ಲ್ಟಾಧೆಯನಾಂತು ಸೈರಿಸುತಮಾತ್ಮನೊಳಿರ್ದ ಮಲೀಮಸಂಗಳಂ
ಸೋದಿಪೆನೆಂಬೆನಳ್ಳೆದೆತನಂ ಬಿಡದಾಯ್ತು ನಿಜಾತ್ಮ ದೃಷ್ಟಿಯಿಂ
ಸಾಧಿಪೆನೆಂಬೆನೊಂದೊಡೆ ಮನಂ ಚಳಮಾಯ್ತಪರಾಜಿತೇಶ್ವರಾ

೨೩

ಭೂರಿಮತಂಗಳಂ ತಿಳಿವುದುಂ ಪಲರಂ ಮತಿದೋರಿ ಧರ್ಮದೊಳ್
ಸೇರಿಪುದುಂ ಮಹೋಗ್ರತಪದೊಳ್ಪಟುವಪ್ಪುದುಮಾತ್ಮನಂ ಮನೋ
ರಾಗೊಳೀಕ್ಷಿಸುತ್ತೆ ಭವಬಂಧಮನಿಕ್ಕುವ ಬುದ್ದಿ ಸುಮ್ಮನೆ
ಬಾರದದರ್ಕೆ ನಿಮ್ಮ ಕರುಣೋನ್ನತಿಬೇಕಪರಾಜಿತೇಶ್ವರಾ!

೨೪

ಕುಡುವ ಸಮರ್ಥರಾರಖಳಲೋಕಕೆ ನೀಂ ಪೊರಗಾಗಿ ಮಾನವಂ
ಪಡೆವ ಪದಂಗಳಾವುವು ತಪಂ ಶ್ರುತಮುಂ ಪೊರಗಾಗಿ ಬಲ್ಲವಂ
ಪಿಡಿವ ಸುವಸ್ತುವಾವುದು ಮಣಿತ್ರಿತಯಂ ಪೊರಗಾಗಿ ಸೋಲು ಕ
ಣ್ಣಿಡುವೆಡೆಯಾವುದಾತ್ಮವಿಭವಂ ಪೊರಗಾಗಪರಾಜಿತೇಶ್ವರಾ!

೨೫

ಪುಟವಿಡುವಲ್ಲಿ ಕಿಚ್ಚಿನುರಿಗಂಜಿದೊಡಾ ಕನಕಕ್ಕೆ ಕೂಡಿದಾ
ಕುಟಿಲತೆ ಪೋಕುಮೇ ಮಲಕಲಂಕಮನೂದಿ ಕಳಲ್ಜಿ ಕಾಂತಿಸಂ
ಪುಟದೊಳಗಾತ್ಮನಂ ನಿಲಿಸಿ ನಿರ್ಮಲನಾಗುವೆನೆಂಬ ಭವ್ಯನು
ತ್ಕಟತಪದುಬ್ಬೆಗಳ್ಕಿದೊಡೆ ಸಿದ್ಧಿಪುದೇ! ಅಪರಾಜಿತೇಶ್ವರಾ !

೨೬

ರಾಗಕೆ ರೋಷಕಾಗಿ ಲಲನಾದಿವಿಯೋಗದೊಳುಗ್ರಯುದ್ಧದೊಳ್
ನೀಗಿದೆನಂಗಕೋಟಿಗಳನಂತದರಿಂ ಭವರೋಗಿಯಾದೆನಾ
ರೋಗದ ಮೂಲಮಂ ಸುಡುವ ಘೋರತಪಂದಳೆದೊಂದುಕಾಯಮಂ
ತ್ಯಾಗಿಸಲಂಜುತಿರ್ದಪೆನಲಾ ಧೃತಿದೋರಪರಾಜಿತೇಶ್ವರಾ!

೨೭

ಪೋಗದೆ ಪೋದ ಪೋದ ಭವಕೋಟಿಗಳೊಳ್ಮಳಿಸಂದು ಕೊಂದು ತಾಂ
ಕೂಗುವ ಮೋಹರಾಕ್ಷಸನನುಗ್ರತಪೋಭರಧೀರನಾಗಿ ನಾಂ
ತಾಗುವೆನೆಂದು ತಳ್ತಿರಿದು ಗೆಲ್ವೆನದೆಂದು ಜಗಕ್ಕೆ ಮಿತ್ರನಾ
ನಾಗುವೆನೆಂದು ನಿನ್ನೆಡೆಯನೆಯ್ದುವೆನೆಂದಪರಾಜಿತೇಶ್ವರಾ!

೨೮

ಹೇವರಮಂ ಕ್ಷಣಾಂತರಕೆ ತೋರ್ಪ ಸುಖಕ್ಕೊಲವಿಂದೊ ನಾಳೆಯೋ
ಸಾವ ಜನಂಗಳೊಳ್ಮಮತೆ ಮತ್ಸರವೀಗಳೊ ಬೈಗಿನಾಗಳೋ
ಬೇವ ಶರೀರದೊಳ್ಬರ್ದುಕುವಾಸೆ ವಿರಕ್ತಿಯೊಳಾತ್ಮತತ್ತ್ವಮಂ
ಭಾವಿಸಿ ಮುಕ್ತ ನಾಗಲರಿದಾಯ್ತುಕಟಾ! ಅಪರಾಜಿತೇಶ್ವರಾ!

೨೯

ರೋಗಿಗಪಥ್ಯಮೇ ರುಚಿಯೆನಿಪ್ಪುದು ವೈದ್ಯಮೆ ಕೈಪೆಯಾದೊಡಾ
ರೋಗವಿನಾಶಕಾವುದು ಹಿತಂ ಮನುಜಂಗದರಂತೆ ಭೋಗಮೇ
ರಾಜಿಸುತಿರ್ಕುಮಾದೊಡಮದಂ ಕಡೆಗೊತ್ತಿ ತಪೋವ್ರತಾಗಮೋ
ದ್ಯೋಗದೊಳಾಡದಿರ್ದೊಡವನೇಂ ಕಿಡನೇ! ಅಪರಾಜಿತೇಶ್ವರಾ!

೩೦

ನಾಗನರಾಮರೇಂದ್ರರ ಸುಖಂ ಸಿರಿಯುಂ ನಿಜದಿಂದೆ ಭಾವಿಸಲ್
ಜೋಗಿಮಹೇಂದ್ರಜಾಲದ ಕುಮಂತ್ರದೆ ತೋರಿದ ಮಾಮರಂಗಳೊಳ್
ತೂಗುವ ಪಣ್ಗಳಂ ಸವಿದೆನೆಂಬನ ಸಂಭ್ರಮದಂತೆ ಕರ್ಮಸಂ
ಯೋಗದಿನಾಯ್ತು ಪೋಯ್ತೆನಿಸುಗುಂ ಪಿರಿದೇನಪರಾಜಿತೇಶ್ವರಾ!

೩೧

ಮುಕ್ತಿಯೊಳಲ್ಲದಿಲ್ಲ ಸುಖವಂತದು ಕರ್ಮವಿನಾಶವಿಲ್ಲದೆ
ವ್ಯಕ್ತಿಗೆ ಬಾರದಾ ದುರಿತನಾಶಕೆ ದೀಕ್ಷೆಯೆ ಬೇಕು ಮೋಹದಾ
ಶಕ್ತಿಯೊಳಿರ್ದವಂಗೆ ರುಚಿದೋರದು ದೀಕ್ಷೆಯದರ್ಕೆ ನಿಮ್ಮ ಸ
ದ್ಭಕ್ತಿಯೆ ಬೀಜಮೊಯ್ಯನದನೀವುದು ಮುಂದಪರಾಜಿತೇಶ್ವರಾ!

೩೨

ಶಕ್ತಿಗೆ ತಕ್ಕ ದಾನ ಗುರುಪೂಜನ ಸುವ್ರತ ಪರ್ವಕಾಲನಿ
ರ್ಭುಕ್ತಿಗಳಂ ನೆಗಳ್ಚುತೆ ಜಿನಾಗಮಗೋಷ್ಠಿಗಳಲ್ಲಿ ಧರ್ಮಸಂ
ಯುಕ್ತರ ಮೇಳದೊಳ್ ಕಳೆಯುತುಂ ದಿನಮಂ ನಡೆವಂಗೆ ಮೋಹದಾ
ಶಕ್ತಿ ಸಡಿಲ್ದು ಪೋಪುದಿದು ಭಕ್ತಿಯಲಾ! ಅಪರಾಜಿತೇಶ್ವರಾ!

೩೩

ಮಾಡುವುದರ್ಕೆ ಶಕ್ತಿ ತನಗೊಚ್ಚತಮಿಲ್ಲದೊಡೊಲ್ದು ಧರ್ಮಮಂ
ಮಾಡುವರಿಲ್ಲಿ ನೋಡಿ ಪರಿಣಾಮವನೆಯ್ದುವುದೊರ್ಮೆ ನೋಳ್ಪುದುಂ
ಕೂಡದೊಡಂತೆ ಕೇಳು ಸುಖಿಯಪ್ಪುದು ನಿಮ್ಮನೆ ನಂಬಿ ಧರ್ಮಮಂ
ಜೋಡಿಸಿಕೊಂಬುದರ್ಕೆ ಬಿರಿಸುಂಟೆ! ಜನಕ್ಕಪರಾಜಿತೇಶ್ವರಾ!

೩೪

ಹವಣಿಸಿ ಕೊಂಬುದೊಯ್ಯನೆ ಪರಿಗ್ರಹಮಂ ಗತಿನಾಲ್ಕರಂದಮಂ
ಶಿವಪದದಂದಮಂ ತಿಳಿಯುತಿರ್ಪುದು ಕಾಯದ ಕಷ್ಟಮಂ ನಿಜಾ
ತ್ಮವಿಪುಲಶುದ್ಧಿಯಂ ನೆನೆಯುತಿರ್ಪುದು ಕೂಡೆ ವಿರಕ್ತಿ ತಾನೆ ಸಂ
ಭವಿಪುದು ದೇಹಿಗೆಂದೊರೆವುದೋಜೆಯಲಾ! ಅಪರಾಜಿತೇಶ್ವರಾ!

೩೫

ಮಿಕ್ಕ ಪರಿಗ್ರಹಗ್ರಹಿತನನ್ಯರಿನಾದುಪದೇಶಲೇಶಮಂ
ಲೆಕ್ಕಿಪನೇ ವಿರೋಧಿಗಳ ಬಲ್ಲನೆ ಮೆಲ್ಲೆರ್ದೆಯುಂಟೆ ಮತ್ತವಂ
ನಕ್ಕುದು ನಕ್ಕುದೇ ಮುನಿದುದುಂ ಮುನಿಸೇ ಅವನಾಟದೆಲ್ಲವುಂ
ಮಕ್ಕಳ ಮೇಳ ದಾಟವೊಲಿರ್ಪುದಲಾ! ಅಪರಾಜಿತೇಶ್ವರಾ!

೩೬

ಗ್ರಹವೆಡೆಗೊಂಡವಂಗೆ ಮರವೊರ್ಮೆ ವಿವೇಕವದೊರ್ಮೆ ಕೂಡೆ ಸಂ
ಗ್ರಹಿಸುತಮಿರ್ಕುಮಲ್ಲದೆ ಯಥಾಸ್ಥಿತಿಯುಂಟೆ ನಿರಂತರಂ ಪರಿ
ಗ್ರದೊಳಗಿರ್ದವಂಗೆ ನುಡಿಯುಂ ನಡೆಯುಂ ಕ್ಷಣಿಕಂಗಳಲ್ಲದೇ
ಸಹಜ ಚರಿತ್ರದೊಳ್ನಿರುಗೆ ಯೆತ್ತಣ ಮಾತಪರಾಜೇಶ್ವರಾ!

೩೭

ಸೊರ್ಕಿ ಶರೀರ ನಾರಿಧನವೆನ್ನವಿವೆಂದವರಲ್ಲಿ ಕಣ್ಮನಂ
ಸಿರ್ಕಿವಿವೇಕಿಗಳ್ನುಡಿದ ಧರ್ಮಮನೊಲ್ಲದೆ ಕೂಳ ಕೊರ್ಬಿನೊಳ್
ಕರ್ಕಶವೃತ್ತಿಯೊಳ್ನಡೆವ ಕಾಮುಕರಂತಕನೊಯ್ವ ಕಾಲದೊಳ್
ಮರ್ಕಟನಂತೆ ಪಲ್ಗಿರಿವರೇತರ ಬಾಯಪರಾಜಿತೇಶ್ವರಾ!

೩೮

ರಚ್ಚೆಯ ಸಂಭ್ರಮಕ್ಕೆ ಕುಣಿದಿಚ್ಛೆಯ ಕೂಳುಣುತಂ ಕ್ಷಣಾಂತದೊಳ್
ಕಿಚ್ಚಿನ ಕೊಂಡಮಂ ಪುಗುವ ರಂಡೆಯವೊಲ್ವಿಷಯಂಗಳಿಚ್ಛೆಯಂ
ಮೆಚ್ಚಿ ಮನಕ್ಕೆ ಬಂದ ತೆರದೊಳ್ನಡೆದೊಲ್ಲದೆ ಸುವ್ರತಂಗಳಂ
ಹುಚ್ಚರೊ ದುರ್ಗತಿಸ್ಥಳಕೆ ಬೀಳ್ವರದೇಕಪರಾಜಿತೇಶ್ವರಾ!

೩೯

ಪಿಂದಣ ಜನ್ಮ ಜನ್ಮದೊಳಗೆಲ್ಲಿದನೀ ಭವದತ್ತ ತನ್ನನಾ
ರ್ತಂದರದೆಲ್ಲ ಮುಂದೆ ತನಗಿನ್ನೆಡೆ ಪುಟ್ಟಿದ ತಾಣತಾಣದೊಳ್
ಕುಂದದುಪಾರ್ಜಿಸಿರ್ದ ಧನಮಂ ತನುಮಂ ಬರುತೊಂದನುಂ ಮನಂ
ತಂದುದೆ ನಿಮ್ಮ ನಚ್ಚಿರದೆ ಚಿಂತಿಪುದೇಕಪರಾಜಿತೇಶ್ವರಾ!

೪೦

ಇತ್ತೊಡೆ ಬರ್ಪುದೇ ಬಡತನಂ ಕುಡದಿರ್ದೊಡೆ ಲಕ್ಷ್ಮಿ ನಿಲ್ವುದೇ
ಸತ್ತೊಡೆ ಜೀವನಂತೆ ಲಯವಾದನೆ ಜೀವಿಸುತಿರ್ದೊಡಿರ್ದನೇ
ಎತ್ತಣ ಮಾಡಿವೆಲ್ಲ ಬರುತಂ ಬಯಲಾಗುತಮಿರ್ಪುವೈಸೆ ನಿ
ಮ್ಮತ್ತಣ ಭಕ್ತಿಯೊಂದೆ ನಿಜಸಿದ್ಧಿಯಲಾ! ಅಪರಾಜಿತೇಶ್ವರಾ!

೪೧

ನಿನ್ನ ಪದಾಬ್ಜಭಕ್ತಿ ವಿಷಯಾರ್ಥವಿರಕ್ತಿ ತಪೋಭರಕ್ಕೆ ಸಂ
ಪನ್ನತೆವೆತ್ತ ಶಕ್ತಿ ತನುವಂ ಸಲೆ ಭೇದಿಸಿ ತನ್ನ ರೂಪನ
ಚ್ಛಿನ್ನದೆ ಕಾಣ್ಬ ಯುಕ್ತಿ ಗುಣದಲ್ಲನುರಕ್ಕಿ ಇವಾಗೆ ಮುಕ್ತಿ ಜೀ
ವಂ ನರನಾಗಿವಂ ಪಡೆಯದಿರ್ದೊಡದೇಕಪರಾಜಿತೇಶ್ವರಾ!

೪೨

ನಿನ್ನೊಳಗಾದ ಭಕ್ತಿ ಗಡ ನಿರ್ವೃತಿ ಬೇಕು ಗಡಂ ವಿಶುದ್ಧದಿಂ
ತನ್ನಿರವುಂ ಭವತ್ಪತಿ ಗಡಾಂತುದು ದೀಕ್ಷೆ ಗಡಂ ಬಳಿಕ್ಕಹೋ
ಸನ್ನಿ ಗಡಂ ಬಿಸಿಲ್ಗಡ ಭಯಂಗಡ ಬಾಯ್ಸವಿಯಾಸೆಯುಂ ಗಡಂ
ನನ್ನ ಮನೋವಿಕಾರತೆಯನಾಡುವೆನೇನಪರಾಜಿತೇಶ್ವರಾ!

೪೩

ನಾಲಗೆಗಾವುದಿಚ್ಛೆ ತವ ನಾಮರಸಾಯನಮೊಂದೆ ನನ್ನ ಚಿ
ತ್ತಾಲಯದೊಳ್ಬೆಳರ್ಪ ಮಣಿದೀಪಮದಾವುದು ನಿನ್ನ ರೂಪೆ ಪೊ
ಯ್ಮಾಲೆಯ ಮೆಯ್ಯ ಭಾರಣೆಯ ಹಿಂಗಿಸುವೌಷಧಿಯಾವುದೆನ್ನ ಚಿ
ತ್ಪಾಲಕ ನಿನ್ನ ಮಾರ್ಗದ ತಪಂಗಳಲಾ! ಅಪರಾಜಿತೇಶ್ವರಾ!

೪೪

ತೊಗಲ ಪಸುಂಬೆಯೊಳ್ಪೊಲಸಿನೋವರಿಯೊಳ್ರುಜೆಯೆಂಬ ಚೇಳ್ಗಳಾ
ಪಗವಿನೊಳಿರ್ಪವೊಲ್ತ ನುವಿನೊಳ್ಕವಿದಿರ್ದಪನಾತ್ಮನೆಂಬುದಂ
ಬಗೆಯದ ಕಾರಣಂ ಬರ್ದುಕು ರಂಜಿಸಿತಲ್ಲದೆ ತೂಗಿ ನೋಳ್ಪಿನಂ
ನಗಲೆಡೆಯುಂಟೆ ತುತ್ತಿಡೆ ಮನಂಬಹುದೇ! ಅಪರಾಜಿತೇಶ್ವರಾ!

೪೫

ಮಾಸು ಮುಸುಂಕಿ ತಾಯೊಡಲೊಳೆಂತಿರವರ್ಪುದು ಮೂತ್ರಮಾರ್ಗದೊಳ್
ಹೇಸದೆ ಬರ್ಪುದೆಂತು ಮೊರದೊಳ್ಮಲಮೂತ್ರದೊಳಾಳುತೇಳುತಂ
ಕೂಸೆನಿಸಿರ್ಪುದೆಂತುಟದನಾಂ ಮರೆದಾಗಳೆ ಠಕ್ಕು ಜವ್ವನಂ
ಸಾಸದವೆಂದು ನಚ್ಚಿದೆನಲಾ ಮತಿದೋರಪರಾಜಿತೇಶ್ವರಾ!

೪೬

ಪಗೆಯ ವಶಕ್ಕೆ ಸಿಲ್ಕಿ ಸೆರೆಯಿರ್ದ ಮಹಾನುಭವಂಗೆ ನಿದ್ರೆತಾ
ನೊಗೆವುದೊ ಭೋಗದಿಚ್ಛೆಯೆ ವಿಡಾಯವೆ ಮಚ್ಚರವುಂಟೆ ದಿವ್ಯಯೋ
ಗಿಗೆ ರಿಪುಮೋಹಮಂ ಜಯಿಸಿ ಮೆಯ್ದೆರೆಯಂ ಕಳೆವಂದು ಜೋಕೆಯು
ಜ್ಜುಗವದೆ ಚಿಂತೆಯೈಸೆ ಪೆರತೊಂದಿಹುದೇ! ಅಪರಾಜಿತೇಶ್ವರಾ!

೪೭

ಓದುವ ಪೇಳ್ವ ಕೇಳ್ವ ಪರಿಭಾವಿಪ ಬಲ್ಲನಿತಂ ಪೆರರ್ಗೆ ತಾ
ನೋದಿಪ ಮೂರು ಸಂಜೆಗಳನಾರು ಸುಪರ್ವದಿನಂಗಳಂ ಸದಾ
ಸಾಧಿಸಿ ತಕ್ಕತತ್ಕ್ರಿಯೆಗಳಂ ನೆಗಳ್ದಿಂತುಟು ದಂದುಗಂಗಳಿಂ
ಪೋದೊಡೆ ಕಾಲಮೆಲ್ಲ ಶುಭಕಾಲವಲಾ! ಅಪರಾಜಿತೇಶ್ವರಾ!

೪೮

ನುಡಿವೊಡೆ ದೇವ ನಿಮ್ಮಯ ಮಹಾಸಭೆಯೊಳ್ನುಡಿವಂತಿರೋಜೆಯಿಂ
ನುಡಿವುದು ಪೋಗುವಲ್ಲಿ ಮುಳುವಟ್ಟೆಯೊಳೆಯ್ದುವನಂತಿರೋಜೆಯಿಂ
ನಡೆವುದು ಕುಳ್ಳಿತಿರ್ಪೊರಗುವುಣ್ಬೆಡೆಯೊಳ್ಸೆರೆ ಸಿಲ್ಕಿದಾತನಂ
ತೊಡನೆ ನಿಜಾತ್ಮಚಿಂತೆಯೊಳಿಹಂಗಘವೇನಪರಾಜಿತೇಶ್ವರಾ!

೪೯

ಲೋಕದ ವಾರ್ತೆಯೊಳ್ಬಧಿರನಾತ್ಮಹಿತಂ ಪೊರಗಾದ ಮಾತಿನೊಳ್
ಮೂಕತೆ ತನ್ನ ದೇಹಪರದೇಹದ ನೋಟದೊಳಂಧಕಂ ಪ್ರಮಾ
ದೈಕದೆ ಕಂಡು ರಾಗಿಸಿದೊಡಂ ಸುಡು ಮಾಂಸವಿಕಾರವೆಂದು ಮೆ
ಯ್ಗೋಕರಿಪಾತನಂತಕನನಂಜಿಸನೇ! ಅಪರಾಜಿತೇಶ್ವರಾ!

೫೦

ನೋಡಿದೊಡೆಲ್ಲಿಯುಂ ತನುವಿನೊಳ್ಮತಿಸೋಲದೆ ಶುದ್ಧಜೀವನಂ
ನೋಡುವ ಮಾತನಾಡಿದೊಡೆ ಶಾಂತಿ ಶುಭಂ ಪವಣಾಗೆ ಪೇಳ್ವ ತಾಂ
ಪಾಡಿದೊಡತ್ತಲಿತ್ತ ತೊನೆದಾಡದೆ ನಿನ್ನೊಳೆ ನಟ್ಟ ಚಿತ್ರದಿಂ
ಪಾಡುವನಾಗಿಯುಂ ಕಡು ವಿರಾಗಿಯಲಾ! ಅಪರಾಜಿತೇಶ್ವರಾ!

೫೧

ಕಣ್ಮಲರಳ್ಕರಿಂದೊಸರೆ ನಿಮ್ಮನೆ ನೋಡುತಮಂತರಂಗದೊಳ್
ಪೊಣ್ಮೆ ವಿರೋಧಿ ಭಾವಿಸುತೆ ನಾಲಗೆ ರಾಗಿಸೆ ಪಾಡುತಂಗದೊಳ್
ಉಣ್ಮಿರೆ ರೋಮಜಾಲವೆರಗುತ್ತನುಕಂಪನವೆತ್ತ ಕೆಯ್ಗಳಿಂ
ದಣ್ಮಿ ತವಾಂಘ್ರಿಗಳ್ಗಲರನರ್ಚಿಪೆನೆಂದಪರಾಜಿತೇಶ್ವರಾ!

೫೨

ಮಾತಿನ ಮಾಲೆಯೇಕೆ ಜಿನ ನಿನ್ನಡೆ ತನ್ನೆಡೆಯಲ್ಲದನ್ಯರೊಳ್
ಪ್ರೀತಿಯನಾವನೆಯ್ದಿದನವಂ ತಳುವೇನಳಲೆಯ್ದಿದಂ ಮಹಾ
ಭೀತಿಯನೆಯ್ದಿದಂ ಭವಸಮುದ್ರಮನೆಯ್ದಿದನೆಂದೊಡಾತ್ಮಸ
ದ್ಬೂತಿಗೆ ನೀನೆ ಮಾನ್ಯ ಪೆರರಿಂ ಫಲವೇನಪರಾಜಿತೇಶ್ವರಾ!

೫೩

ಅವನುಮಕ್ಕೆ ನಿಮ್ಮಡಿಗಳಂ ನೆನೆವಾತನೆ ನನ್ನ ಬಂಧು ಸ
ದ್ಭಾವದೆ ಪೂಜಿಪಾತನೆ ಸಖಂ ಶ್ರುತಯೋಗಸಮೃದ್ಧನೆನ್ನ ಸಂ
ಜೀವಕನೆಂಬೆನೇಕಿನಿತು ಪಕ್ಷವಿದೆಂಬೆಯ ನನ್ನ ಮೆಚ್ಚಿನಾ
ದೇವನ ನಚ್ಚಿದಾತನೆನಗನ್ಯನೆ ಪೇಳಪರಾಜಿತೇಶ್ವರಾ!

೫೪

ಲೋಕಮಿದೆಲ್ಲವುಂ ಸ್ಮರಪಿಶಾಚ ವಿಜೃಂಭಿತಮಿಂದ್ರಜಾಲವಿ
ದ್ಯಾಕಥನಂ ಯಮಾಸುರನ ದೀಪನದಾಹುತಿಯಲ್ಲಿ ಪಕ್ಷದಿಂ
ಶೋಕಮನಾರ್ಗೆ ಮಾಳ್ಪೆನೊಲಿದಿರ್ಪೆನದಾರ್ಗೆ ಕನಲ್ವೆನಾರ್ಗೆನಲ್
ಮೂಕತೆಯುಂ ದಯೋಕ್ತಿ ಯೆರಡೇ ಹಿತಮಿನ್ನಪರಾಜಿತೇಶ್ವರಾ!

೫೫

ಮೊನ್ನೆ ಬರುತ್ತೆ ಕಂಡೆನವನಂ ಮೃತವಾದನೆ ಯಾದನಕ್ಕಟಾ!!
ನಿನ್ನೆ ಸುಗೋಷ್ಠಿಗೆಯ್ದನಿವನೊಳ್ ಲಯವಾದನೆ ಯಾದನಯ್ಯೋ! ಇಂ
ದೆನ್ನೊಡವಂದನೀತನಕಟಾ! ಕಡೆಗಂಡನೆ ಕಂಡನೆಂಬ ಮಾ
ತಂ ನೆರೆ ಕೇಳುತೆನ್ನೊಡಲನಚ್ಚುವೆನೆಂತಪರಾಜಿತೇಶ್ವರಾ!

೫೬

ಎಲೆಯೆಲೆ ಇತ್ತಲಿರ್ದ ಮೊಗವತ್ತೊಲೆದೀಕ್ಷಿಸಿ ಮುನ್ನ ಕಂಡರೊಳ್
ಕೆಲಬರನಲ್ಲಿ ಕಾಣಲರಿದಿಂತುಟು ತೋರುತ ಮಾಯಮಪ್ಪ ಮೆ
ಯ್ಬಲೆಯೊಳೆ ಬಾಳ್ವೆನೆಂಬ ಮನವಲ್ಲದೆ ತತ್ತನುವಂ ತಪಂಗಳೊಳ್
ಸಲಿಸಿ ನಿಜತ್ವಮಂ ಪಡೆಯಲಂಜುವೆನೇಕಪರಾಜಿತೇಶ್ವರಾ!

೫೭

ಪೇಳವೆ ವೇಳೆ ವೇಳೆಗಿಳಿವಾಯುವನೀ ಗಳಿಯಾರಸನ್ನೆಯುಂ
ಕೋಳಿಯುಮೋದುತಿರ್ಪ ತಿಥಿಪಾಠಕಘೋಷಣೆ ತಳ್ತು ಪೇಳೆಯುಂ
ಕೇಳುತಮಂತವಕ್ಕಗಿಯದಂಗವಿದಂ ಸ್ಥಿರಮೆಂದೆ ನಚ್ಚಿ ನಿ
ನ್ನೊಳಿಗದಿಚ್ಚೆಯಂ ಮರೆದು ಕೆಟ್ಟೆನಲಾ! ಅಪರಾಜಿತೇಶ್ವರಾ!

೫೮

ಪೊಕ್ಕು ಸಮಾನ ಚಿತ್ತವನೆ ಸಾಧಿಸಿ ಕರ್ಮನಿಬಂಧಮಂ ಲಯ
ಕಿಕ್ಕುವೆನೆಂದು ತಾಳ್ದು ತಪಮಂ ನಡೆಯುತ್ತೆಡೆಯೊಳ್ಕೆಲಂಬರೊಳ್
ನಕ್ಕು ಕೆಲಂಬರೊಳ್ಮುನಿದು ಬಾಳ್ವುದಿದೇಂ ಬಿಡಪೋಗಿ ಮೂರುಗಂ
ಚಿಕ್ಕಿದ ಗಾದೆಯಾದೆನುಪಶಾಂತಿಯನೀಯಪರಾಜಿತೇಶ್ವರಾ!

೫೯

ತುಟ್ಟಿದ ಪಟ್ಟಣಕ್ಕೆ ಪಯಣಂ ಬರುತಿರ್ದವನಲ್ಲಿಗಲ್ಲಿ ತಾಂ
ಬಿಟ್ಟೆಡೆಯೊಳ್ಪಲಂಬರೊಳಗೆಂತು ಸಮಂಬಡೆದಿರ್ಪನಂತೆ ಕ
ಣ್ಣಿಟ್ಟು ನಿಜಾತ್ಮಸಿದ್ಧಿಗೆ ತಪಂಬಡೆವಂ ಪಲರಲ್ಲಿ ಮುಟ್ಟಿಯುಂ
ಮುಟ್ಟದ ಭಾವದಿಂ ನಡೆಯವೇಳ್ಕುಮಲಾ! ಅಪರಾಜಿತೇಶ್ವರಾ!

೬೦

ಅವನೊಳಾದೊಡಂ ಕುಮತಿ ಕಾಳ್ನುಡಿ ಕೀಳ್ನಡೆ ತೋರುತಿರ್ದೊಡಾ
ಜೀವನೆ ನೈಜವೆನ್ನದೆ ತದೀಯಕಷಾಯಗುಣಂಗಳೆಂದವಂ
ಭಾವಿಸಿ ಯಾ ಕಷಾಯತತಿ ತನ್ನೊಳಗಾಗದವೊಲ್ ನಿಜಾತ್ಮನಂ
ಕಾವುತಮಿರ್ಪವಂ ಸ್ವಪರವೇದಿಯಲಾ ಅಪರಾಜಿತೇಶ್ವರಾ!

೬೧

ಗುಣಿಯೆನಿಸುತ್ತೆ ತಾಂ ನಡೆಯುತಿರ್ದೊಡಮನ್ನರ ದುರ್ಗುಣಂಗಳಂ
ಗಣಿಯಿಸಿದಂದು ತಾಂ ಗುಣವಿಹೀನನೆಯಂತದರಿಂದ ಸರ್ವರೊಳ್
ಗುಣವನೆ ಕಾಣ್ಬೊಡುತ್ತಮಗುಣಕ್ಕವರಂ ತರಲಾರೊಡೆಲ್ಲರಂ।
ಗಣಿಯಿಪುದಲ್ಲದಂದವರ ಚಿಂತೆಯದೇಕಪರಾಜಿತೇಶ್ವರಾ!

೬೨

ಸರ್ವಗುಣಂಗಳೊಳ್ಸುಲಭರಾರ್ ಜಿನ ನೀಂ ಪೊರಗಾಗಿ ಲೋಕದೊಳ್
ಪರ್ವಿದ ಮಿಥ್ಯೆಯೊಳ್ವಿಷಮಕಾಲದೊಳೀ ನರಕೀಟಕಂಗಳೊಳ್
ಒರ್ವರೊಳಿರ್ದುದೊಂದು ಗುಣಮಂ ಗುಣಕೋಟಿಯೆನುತ್ತೆ ಕಂಡು ತಾ
ನುರ್ವುವವಂಗೆ ನಿನ್ನ ಗುಣಮೊಲ್ಲಿರವೇ! ಅಪರಾಜಿತೇಶ್ವರಾ!

೬೩

ದುರ್ವಿಷಯಗಳೆಂಬ ವಿಷಮಂ ಕುಡಿದಾರ್ತವಿರೋಧಮೋಹಮೆಂ
ಬುರ್ವಿನ ವತ್ಸನಾಭಿಯನೆ ಮೆಚ್ಚಿ ಕಿಡುತ್ತಿದೆ ಲೋಕವಕ್ಕಟಾ!
ಸರ್ವರ ಮೆಯ್ಯೊಳಾ ವಿಷನಿವಾರಣೆಗಾತ್ಮನಿಜಸ್ವರೂಪದಾ
ನಿರ್ವಿಷಮುಂಟದಂ ಮರೆದು ನೋವರದೇಕಪರಾಜಿತೇಶ್ವರಾ!

೬೪

ಅರಿಯಲೆ ಚಿತ್ರಮೀಯದಘಸಂತಿಯಾತ್ಮನನೆತ್ತ ಲಾನುಮೊ
ಲ್ದರಿದೊಡೆಯಸ್ತಬೆಸ್ತವನೆ ಮಾಡುವುದೊರ್ಮೆ ಯಥಾರ್ಥವಾಗಿ ತಾ
ನರಿದೊಡಮೇನೊ ತನ್ನೊಳಗೆ ತನ್ನನೆ ಛೇದಿಸಿ ಶುದ್ಧ ಸಿದ್ಧನೆಂ
ದರಿವಿನೊಳೀಕ್ಷಿಸಲ್ಕೆ ಬಿಡದಚ್ಚರಿ ನೋಡಪರಾಜಿತೇಶ್ವರಾ!

೬೫

ಗಳಿಸುವನೆಯ್ದೆ ಪಾಪಸುಕೃತಂಗಳನುಣ್ಬನೆರಳ್ಪಲಂಗಳಂ
ಮಳವಶನಾಗಿ ದೇಹಿ ಸುಖಿ ದುಃಖಿ ಕಷಾಯಿ ವಿನಾಶಿ ಕಾಮಿ ಪು
ಲ್ಬುಳು ಸತಿ ಗಂಡು ಷಂಡಲೆನಲಿಂತು ಬಹುಸ್ಥಿತಿಯಪ್ಪನಾತ್ಮನಾ
ಮಳಕುಳಮಂ ಕಳಲ್ವೆ ಸುಖಿಯಪ್ಪನಲಾ! ಅಪರಾಜಿತೇಶ್ವರಾ!

೬೬

ಕರ್ಮನಿಬಂಧನಾಗಿಯುಮಬಂಧನಮೂರ್ತನೆ ಮೂರ್ತನಾಗಿಯುಂ
ಕೂರ್ಮೆ ವಿಷಾದವಿರ್ದುಮಮಲಂ ನಭದಂತಿರೆ ಶೂನ್ಯನಾಗಿಯುಂ
ಧರ್ಮಗುಣಾತಿಶಾಯಿಕನಿದಾತ್ಮನ ವರ್ತನೆಯದ್ಭುತಕ್ಕೆ ಸಾ
ಸಿರ್ಮಡಿಯದ್ಭುತಂ ತಿಳಿಯಬಲ್ಲಿದನಾರಪರಾಜಿತೇಶ್ವರಾ!

೬೭

ಏಕನನೇಕನಲ್ಪನಧಿಕಂ ಕ್ಷಯನಕ್ಷಯನಸ್ತಿ ನಾಸ್ತಿ ಮೂ
ಲೋಕಮಿತಂ ಸ್ವದೇಹಮಿತನುತ್ತಮಬೋಧಸುದರ್ಶನಂಗಳಿಂ
ಲೋಕಕಲೋಕಕಂ ನೆರೆವನಂಗದ ನೋಟದೆ ಬದ್ಧನಾತ್ಮನಾ
ಲೋಕನದಿಂದೆ ಮುಕ್ತನಿದು ಶಕ್ಯಮದಾರ್ಗಪರಾಜಿತೇಶ್ವರಾ!

೬೮

ಮಾನವರಾತ್ಮತತ್ವ ಮರಿಯಲ್ಕೆ ಕುವಾದಿವಿವರ್ಜನಕ್ಕೆ ನಾ
ನಾನಯಮುಂ ಪ್ರಮಾಣನಿಧಿಸಂಗ್ರಹಮುಂ ನೆರೆದಿರ್ದುವಲ್ಲದೇ
ಧ್ಯಾನಿಸುವಾಗಳೀ ಬಹುವಿಕಲ್ಪತೆಯಿಲ್ಲ ಮಣಿತ್ರಯಾತ್ಮನೆಂ
ಬೀ ನುತಭಾವಮೊಂದೆ ಬೆಳಗಿರ್ಪುದಲಾ! ಅಪರಾಜಿತೇಶ್ವರಾ!

೬೯

ವ್ಯವಹೃತಿಯೆಂದು ನಿಶ್ಚಯತೆಯೆಂದು ಮಣಿತ್ರಯಮಕ್ಕುಮಲ್ಲಿ ದೇ
ವ ವಚನ ತಾಪಸರ್ಕಳವಧಾರಣೆ ತಾಂ ವ್ಯವಹಾರದಲ್ಲಿ ದೋ
ಷಮನುಳಿವಿಲ್ಲದೇ ಗೆಲಿದೆ ನೀನೆ ಮಮ ಪ್ರಭು ನಿನ್ನ ವಾಣಿಯೇ
ಶಿವಮತವಸ್ತಸಂಗನೆ ತಪಸ್ವಿಯಲಾ! ಅಪರಾಜಿತೇಶ್ವರಾ!

೭೦

ಮೊದಲೊಳೆ ತತ್ತ್ವಸಪ್ತಕದಿ ಪೇಳ್ದು ಮಣಿತ್ರಯಮಂ ಬಳಿಕ್ಕಿದೇ
ನಿದನುಸಿರ್ದದಮೆನ್ನದಿರಿಮಾಪ್ತನೊಳಾಗಮದೊಳ್ತಪಸ್ವಿಯೊಳ್
ಪುದಿದುದು ತತ್ತ್ವವರ್ಗಮದರಿಂದೆರವಿಲ್ಲಮದುಂ ನಿಜಾತ್ಮ ಸಾ
ಧ್ಯದ ಸಹಕಾರಿಯೆಂಬುದು ತವಾಜ್ಞೆಯಲಾ! ಅಪರಾಜಿತೇಶ್ವರಾ!

೭೧

ನಿಶ್ಚಯದಿಂದಮಾತ್ಮನೆ ಸುದರ್ಶನಮಾತ್ಮನೆ ಶುದ್ಧ ಬೋಧಮಂ
ತಶ್ಚರಿತಂ ನಿಜಾತ್ಮನೆ ಮಣಿತ್ರಯರೂಪನುಮಾತ್ಮನೆಂಬುದುಂ
ನಿಶ್ಚಲವಾಗಿ ನಂಬಿ ನಿಜಮಂ ತಿಳಿದಲ್ಲಿಯೆ ಲೀನವಾಗಿ ಚೀ
ತಶ್ಚಿರಮಂ ನೆಗಳ್ಚೆ ಶಿವಮೆಂದೆಯಲಾ! ಅಪರಾಜಿತೇಶ್ವರಾ!

೭೨

ನಿನ್ನನೆ ನಂಬು ನಂಬಿದೊಡೆ ನನ್ನನೆ ನಂಬಿದೆ ಶುದ್ಧ ದೃಷ್ಟಿಯಿಂ
ನಿನ್ನನೆ ನೋಡು ನೋಡಿದೊಡೆ ನನ್ನನೆ ನೋಡಿದನಂ ಸುಚಿತ್ತದಿಂ
ನಿನ್ನೊಳಗೈಕ್ಯವಾಗದುವೆ ನನ್ನೊಳಗೇಕತೆಯಾದುದೆಂದು ರ
ತೋನ್ನತಿಯಿಂತುಟೆಂದೊರೆದೆ ನೀನೆ ಬುಧಂಗಪರಾಜಿತೇಶ್ವರಾ!

೭೩

ವರಗುರುಪಂಚಕಂ ವರತಪಶ್ಚರಣಂಗಳಿರ್ಪುವಲ್ಲಿ ಸ!
ದ್ಗುರು ಗುಣಶೀಲಸಂಯಮತೀರ್ಥಪವಿತ್ರತೆಯಲ್ಲಿ ತೋರ್ಕುಮು
ತ್ತರ ಗುಣರಾಶಿ ಮೂಲಗುಣವೃಂದಮಿರ್ದಪುದಲ್ಲಿ ನಿನ್ನ ಚಿ
ತ್ಪರಿಣತೆಯಲ್ಲಿ ನಿಟ್ಟಿಸೊಳಗೆಂದೆಯಲಾ! ಅಪರಾಜಿತೇಶ್ವರಾ!

೭೪

ಅರಿವರಿವಿಂಗಡರ್ಪುಮರಿವಾತನುಮಂತದೆ ಕಾಣೆ ಕಾಣ್ಕೆಗಂ
ಗುರಿಯುಮಡಂಗಿ ಕಾಣ್ಬನುಮದೇ ಶರಣಂ ಶರಣಾರ್ಥಿ ಸಾರ್ವುದುಂ
ಎರಕವೆರಂಗುವಾತನೆರಕಕ್ಕಧಿದೈವಮುಮಾತ್ಮತತ್ವವೇ।
ಪೊರಗರಸಲ್ಕೆವೇಡ ನಿಜವೆಂದೆಯಲಾ! ಅಪರಾಜಿತೇಶ್ವರಾ!

೭೫

ಅದನರಿದಾತನೆಲ್ಲಮರಿದಾತನದೊಂದನೆ ಕಂಡನೆಲ್ಲಮಂ
ಸದರದೆ ಕಂಡನಲ್ಲಿಗೆ ಮನಂ ವಶಮಾದೊಡೆ ಮುಕ್ತಿ ಸಾಧ್ಯಮಾ
ದುದು ಹಲವೇಕದೊಂದು ಪೊರಗಾದೊಡೆ ಕಲ್ತ ಸಮಸ್ತ ಶಾಸ್ತ್ರದಿಂ
ಚದುರರೆನಿಕ್ಕುಮಾತ್ಮಪದ ಸಾಧಕರೇ! ಅಪರಾಜಿತೇಶ್ವರಾ!

೭೬

ಉದ್ಗತ ದೃಷ್ಟಿಯಿಂ ಸಕಲಮಂ ಪೊರಗೀಕ್ಷಿಸವರ್ಪುದಾತ್ಮನಂ
ಹೃದ್ಗತ ದೃಷ್ಟಿಯಿಂದೊಳಗೆ ನಿಟ್ಟಿಸಬಾರದು ಜನ್ಮ ಜನ್ಮದೊಳ್
ಪುದ್ಗಲರೂಪದಾರು ರಸಮಂ ಸುಖಿಸಲ್ಬಹುದಾತ್ಮರೂಪಸಂ
ವಿದ್ಗುಣದಾ ರಸಾನ್ನವನುಣಲ್ಕರಿದಿಂತಪರಾಜಿತೇಶ್ವರಾ!

೭೭

ತಡೆತಡೆದೋಡುತಿರ್ಪ ಮನಮಂ ಪಿಡಿದಾತ್ಮ ನೊಳಿಟ್ಟು ತನ್ನ ತಾಂ
ನುಡಿನುಡಿದಾತ್ಮನೊಳ್ ಸ್ವಪರತತ್ತ್ವ ರಹಸ್ಯಮನಾತ್ಮರೂಪಮಂ
ಅಡಿಗಡಿಗೊಲ್ದು ನೋಡುತ ಶಮಾಮೃತಮಂ ಸಲೆ ಪೀರ್ದು ಪೀರ್ದು ತಂ
ಪಡರ್ದ ತಪಸ್ವಿಯೇ ಸುಖಿ ಪೆರಂ ಸುಖಿಯೇ! ಅಪರಾಜಿತೇಶ್ವರಾ!

೭೮

ಮನಮನಿದೊಂದನೇ ತನುವಿನೊಳ್ನೆಲಸಿರ್ದ ನಿಜಾತ್ಮನಲ್ಲಿ ನೆ
ಟ್ಟನೆ ನಿಲಿಸಲ್ಕೆ ಸಾಕು ಭಯವತ್ತಣದೆತ್ತಣದಾರ್ತರೌದ್ರಮೀ
ತನುಸುಖದಾಸೆಯೆತ್ತಣದು ತೀವ್ರಪರೀಷಹವೆತ್ತ ಮೋಹಮ
ಲ್ಲಿನ ಕುರುಪಾಟವೆತ್ತ ಪಲವುಂ ಕೊಸರೇಕಪರಾಜಿತೇಶ್ವರಾ!

೭೯

ಮನದ ವಿಕಲ್ಪಮಿಂದ್ರಿಯಕಷಾಯಮನಾಗಿಪುದಂತವಾದೊಡಾ
ತನುವಚನಂಗಳಾಡುವವು ತಾನದರಿಂದವೆ ಕರಲಬ್ಧಿಯಾ
ಮನವೆ ನಿಜಾತ್ಮರೂಪದೊಳೆ ಮಗ್ನವನೆಯ್ದಿದ ಮೇಲೆ ಕರ್ಮಬಂ
ಧನದೆಡೆಯೆತ್ತ ನಿರ್ಜರೆಗಿದೊಂದೆಯಲಾ! ಅಪರಾಜಿತೇಶ್ವರಾ!

೮೦

ಮನದ ಕುಭಾವಮೇ ದುರಿತಮಲ್ಲಿ ಸುಭಾವಮೆ ಪುಣ್ಯಮೀಯೆರ
ಳ್ಮನದೊಳಗಿಲ್ಲವಾ ಮನವೆ ತನ್ನ ನಿಜಾತ್ಮನೊಳೈಕ್ಯವಾಗಿ ಸು
ಮ್ಮನೆ ನಿಲೆ ಮೋಕ್ಷಮಂತದರಿನಾತ್ಮನೆ ತಾಂ ಪಗೆ ತಾನೆ ಬಂಧುವುಂ
ತನಗೆ ವಿನಿಶ್ಚಯಕ್ಕೆ ಗುರು ತಾನೆಯಲಾ! ಅಪರಾಜಿತೇಶ್ವರಾ!

೮೧

ಇಷ್ಟರುಮೆನ್ನೊಳಿರ್ದಪರನಿಷ್ಟರುಮೆನ್ನೊಳೆ ಇರ್ದಪರ್ ಜಿನೋ
ದ್ದಿಷ್ಟಮಿದಿರ್ದ ಮೇಲೆ ಪೊರಗೇನನಭಿಕ್ಷಿಪೆನೇನ ಮಾಡುವೆಂ
ಅಷ್ಟ ಗುಣಂಗಳೊಳ್ನಲಿವುತೊತ್ತರಿಸುತ್ತೊಡನಷ್ಟ ಕರ್ಮಮಂ
ದೃಷ್ಟಿಯನೆನ್ನೊಳಾಂ ನಿರಿಸಿ ನಿಂದಪೆನಿನ್ನಪರಾಜಿತೇಶ್ವರಾ!

೮೨

ಅರಸುವೆವೆನ್ನ ದೇಹದೊಳಗೆನ್ನನೆ ಕಾಣ್ಬೆನಮೂರ್ತಸಿದ್ಧನಂ
ಪೊರಗೊಳಗೆಲ್ಲಮಂ ತೊಳೆದು ತಿಂಗಳ ಪುತ್ತಳಿ ಮಾಡಿ ನೋಡುವೆಂ
ತರುಬುವೆನಲ್ಲಿಯೇ ಮನಮನಾಗಳ ಬಾಹ್ಯ ಸಮಸ್ತಚಿಂತೆಯಂ
ಮರೆವೆನನಂತಸೌಖ್ಯದೊಳಗಾಳ್ದಪೆನಾನಪರಾಜಿತೇಶ್ವರಾ!

೮೩

ಬಾಗದೆ ತೂಗದೋರೆ ಪುಗದೊಯ್ಯನೆ ಸೈಕನೆ ಕುಳ್ಳಿತಕ್ಕೆ ನಿಂ
ದಾಗಲಿ ದೇಹ ಮೂಷೆಯನುಪಾಯದೊಳಾಂತು ತಪೋಗ್ನಿಗೊಡ್ಡಿ ಭೇ
ರಾಗಿರೆ ಸೋರ್ಚಿ ಕರ್ಮಮಯಣಾಕೃತಿಯಂ ಬಳಿಕಲ್ಲಿ ತೋರುತಿ
ರ್ಪಾಗಸಮೆಂದು ಕಾಣ್ಬೆನೊಳಗೆನ್ನನೆನಾಪರಾಜಿತೇಶ್ವರಾ!

೮೪

ಚೇತನನಾತ್ಮನಾಗಸಮಚೇತನಮೆಂದಿನಿತಲ್ಲದೇ ಸ್ವರೂ
ಪಾತಿಶಯಕ್ಕೆ ಭೇದವಿಡಲಿಲ್ಲ ನಭಕ್ಕೆ ಯುಮಾತ್ಮತತ್ತ್ವಕಂ
ಓತದರಿಂದಮಾಗಸವೆ ತಾಂ ಪುರುಷಾಕೃತಿಯಾಯ್ತೊ ಎಂಬುಪಾ
ಯಾತುರವಿಟ್ಟು ನೋಳ್ಪೆನೊಳಗೆನ್ನನೆ ನಾನಪರಾಜಿತೇಶ್ವರಾ!

೮೫

ಸಿದ್ಧರ ರೂಪಿನೊಳ್ಮೊದಲೆ ನೋಟದ ಸಾಧನೆ ಮಾಡಿ ಮಾಡಿ ಸಂ
ಶುದ್ಧದೊಳಾನುಮಿಂತೆ ಯೆನುತಾಗಳೆ ತನ್ನನೆ ನೋಡಿ ನೋಡಿಯಾ
ಸಿದ್ಧರುಮಾನುಮೆಂಬೆರಡು ಭೇದವಡಂಗಿ ನಿಜಾತ್ಮನಲ್ಲಿ ಸ
ನ್ನದ್ಧದೊಳೈಕ್ಯವಾಗುವನೆ ಸಿದ್ಧನಲಾ। ಅಪರಾಜಿತೇಶ್ವರಾ!

೮೬

ನಾಸಿಕದಗ್ರದೊಳ್ನೆಲಸಿ ದೃಷ್ಟಿಗಳೊಪ್ಪೆ ಮನಂ ಲಲಾಟದೊಳ್
ಸೂಸದೆ ಕೂರ್ಮನಂತೊಳಗಡಂಗಿಸಿ ಮತ್ತುಳಿದಿಂದ್ರಿಯಂಗಳಂ
ಶ್ವಾಸಮದೊಯ್ಯನಾಗದೊಳಗೆನ್ನೆ ನಾಂ ಪರಿಯಂಕ ಚಂದ್ರ ಭ
ದ್ರಾಸನಮಾಡಿಯಾದವರೋಳೀಕ್ಷಿಪೆನಿನ್ನಪರಾಜಿತೇಶ್ವರಾ!

೮೭

ಕಲಿಗೆ ಮಹಾಬಲಂಗೆ ಮುಖಕುಕ್ಕುಟಕೂರ್ಮಸರೋಜವಜ್ರಕುಂ
ಡಲಿಕ ಮಯೂರವೀರಮಕರೋತ್ಕುಟಿಕಾಸನಮಾದಿಯಾದಿವುಂ
ಫಲಿಸುಗುಮಲ್ಪಶಕ್ತಿಗೆಸೆಗುಂ ಪರಿಯಂಕಮದೊಂದು ಮಗ್ಗುಲೊಳ್
ಮಲಗಿಯುಮಾತ್ಮದೃಷ್ಟಿಯಹುದಾರದವಂಗಪರಾಜಿತೇಶ್ವರಾ!

೮೮

ಆಸನಸಂಕುಲಂಗಳನುಬಂಧದಿ ಜಾಡ್ಯಹರಂ ಪಟುತ್ವವೆ
ಲ್ಲೋಸರಿಕುಂ ಪುರಾಣರುಜೆ ಪೂರಕಕುಂಭಕರೇಚಿಕಂಗಳ
ಭ್ಯಾಸಮೆ ಚಿತ್ತಮಂ ಸ್ಥಿರತೆ ಮಾಡಿ ವಿಕಲಮನುತ್ತುಗುಂ ಸಮಂ
ತೀ ಸಮಕಟ್ಟು ಬೇಕು ನಿಜಮಂ ಬಗೆವಂಗಪರಾಜಿತೇಶ್ವರಾ!

೮೯

ಪೊಳೆ ಕರೆಯೊತ್ತು ವಾರ್ಧಿತಟಮರ್ಹದಗಾರಮರಣ್ಯಮುಂ ವನಂ
ಪುಳಿಲಚಳಂ ಬಿಲಂ ಗುಹೆ ನಿಷೀದಿಕೆ ಪಾಳ್ಮನೆ ರುದ್ರಭೂಮಿಯಿ
ನ್ನುಳಿದ ವಿವಿಕ್ತಮಕ್ಕೆ ಪಶು ಷಂಡ ವಧೂ ಖಳಜಂತು ದಾರಿಗರ್
ಸುಳಿಯದ ತಾಣಮಾದೊಡಿವು ಜಾನಕೆ ಲೇಸಪರಾಜಿತೇಶ್ವರಾ!

೯೦

ಬಾರದ ಜಾನಮಂ ಬರಿಸಿಕೊಂಬ ಸುಸಾಧುಜನಕ್ಕಿವಲ್ಲದೇ
ಘೋರತಪೋಧನಂ ಬಗೆವನೇ ಮಳೆ ಗಾಳಿ ಸಿಡಿಲ್ಬಿಸಿಲ್ಗಳಂ
ಸೀರುಡು ಪಾವು ಪೆರ್ಬುಲಿಗಳಂ ಪೆರರಿಟ್ಟು ಪಸರ್ಗಮಂ ಮನೋ
ಧೀರದೆ ಗೆಲ್ದು ನಿತ್ಯಪದನಪ್ಪನಲಾ! ಅಪರಾಜಿತೇಶ್ವರಾ!

೯೧

ರಂಭೆಯು ಬಂದು ತಾಂ ಕೊರಲನಪ್ಪಿದೊಡಂ ಪುಳಕಂಗಳಾಗದೇ
ಕುಂಭಿ ಚಮೂರು ಬೃಂಹಿಸುತೆ ಗರ್ಜಿಸುತಂ ಬರೆ ಬಲ್ಪುಗುಂದದೇ
ಜೃಂಭಿಸಿ ಕಾಳುಗಿಚ್ಚು ಕವಿಯುತ್ತಿರೆ ಬುದ್ಧಿ ಕಲಂಕದೇ ಶಿಲಾ
ಸ್ತಂಭವೆನಲ್ಕೆಯೆನ್ನೊಳಗೆ ನಿಲ್ವೆನದೆಂದಪರಾಜಿತೇಶ್ವರಾ!

೯೨

ಇರುತಿರುತಿರ್ದು ಚಿಂತಿಸಿ ಶರೀರದ ಕರ್ಮದ ರೂಪನಂತೆ ಕೊ
ಕ್ಕರಿಸಿ ತಪೋಗ್ನಿಯಿಂ ಸುಡುವೆನೀ ಭವಬಂಧಮನೆಂದು ಧೈರ್ಯಮಂ
ಕುರಿಸಿ ಪರೀಷಹಂ ಬರಿಸಿ ದೇಹಮನೊಡ್ಡಿ ನಿಜಾತ್ಮದೃಷ್ಟಿಯೊಳ್
ತೆರಳದೆ ನಿಂದು ಗೆಲ್ವವನೆ ಧನ್ಯನಲಾ! ಅಪರಾಜಿತೇಶ್ವರಾ!

೯೩

ಒಪ್ಪಿಸಿ ದೇಹಮಂ ತಪದ ತಾಪಕೆ ತನ್ನ ನಭಸ್ವರೂಪಮಂ
ನಪ್ಪರಿದಪ್ಪಿಕೊಂಡು ನಿಲೆ ಲೋಕದ ಕಣ್ಗಿದು ಯೋಗಿವೇಷಮೋ
ಲೆಪ್ಪದ ರೂಪೊ ಕಲ್ಲ ಪರಿಜೋ ಎನೆ ತೋರ್ಪಿನಮಷ್ಟಕರ್ಮಮುಂ
ಕಪ್ಪನೆ ಕಂದಿ ಬೆಂದು ತಪನಂಬುಗವೇ! ಅಪರಾಜಿತೇಶ್ವರಾ!

೯೪

ಆದಿಯ ವಜ್ರಕಾಯದವರ್ಗಲ್ಲದೆ ತಾಳ್ವುದಶಕ್ಯಮುಷ್ಣವಾ
ತಾದಿಪರೀಷಹಂಗಳನದೇಂ ಬಿಸವಂದಮೊ ಈಗಳುಂ ಕೆಲರ್
ಈ ದೊರೆಮೆಯ್ಯೊಳುಗ್ರತರಘೋರಮಹಾತಪಮಂ ನೆಗಳ್ಚುಗುಂ
ಮೇದಿನಿಗೀ ಮುನೀಂದ್ರರೆ ಜಿನೇಂದ್ರರಲಾ! ಅಪರಾಜಿತೇಶ್ವರಾ!

೯೫

ನರಕದೊಳಟ್ಟಿ ಮೆಟ್ಟಿ ಕಡು ಕಾಸುವ ಕೀಸುವ ಸರ್ವಬಾಧೆಯಂ
ಸ್ಮರಿಸಿದೊಡೊತ್ತಿ ಹೇರಿ ಪಶುವಂ ಮೃಗವಾದೊಡೆ ಯೆಚ್ಚು ಕೊಚ್ಚಿ ಗೋ
ಣರಿವುದನಬ್ಬೆಯುಬ್ಬರದ ಗಬ್ಬದೊಳುಬ್ಬಸದಿಂ ಬಳಲ್ದ ತ
ನ್ನಿರವನೆ ಚಿಂತಿಪಂಗೆ ತಪದೊಳ್ಬಿರಿಸೇಕಪರಾಜಿತೇಶ್ವರಾ!

೯೬

ಸ್ವಾಮಿಕುಮಾರನಾ ಗಜಕುಮಾರನಾ ಸುಕುಮಾರನಾತ್ಮ ಚಿಂ
ತಾಮಯ ಸಂಜಯಂತ ಗುರುದತ್ತ ಚಿಲಾತಜ ಧರ್ಮಪುತ್ರರಾ
ಸ್ವಾಮಿಸುವರ್ಣಭದ್ರ ಶಿವಭೂತಿ ಸುದರ್ಶನ ಪಾರ್ಶ್ವನಾಥರಾ
ನೇಮವಿದೆಂದು ನಿಂದೊಡೆದೆಯೊಳ್ಭಯವೇ! ಅಪರಾಜಿತೇಶ್ವರಾ!

೯೭

ಮೆಯ್ಯ ನಿರಾಶೆ ಘೋರತಪಮುತ್ತಮಸಂಯಮಮಾತ್ಮತತ್ತ್ವ ಮಂ
ಕೆಯ್ಯೊಳಗಿರ್ದ ಕನ್ನಡಿಯ ನೊಳ್ಪವೊಲೀಕ್ಷಿಪ ಬೋಧೆ ಕೂಡಿದಾ
ಸಂಯಮಿಗೆಲ್ಲಿ ಕಾಂಕ್ಷೆಯಿದಿರಿಂ ಕ್ಷಣದೊಳ್ಭವವೃಕ್ಷ ಮೂಲಮಂ
ಕುಯ್ಯನೆ ಸುಟ್ಟು ತೂರಿ ಶಿವನಾಗಿರನೇ! ಅಪರಾಜಿತೇಶ್ವರಾ!

೯೮

ಕವಿದ ಮುಗಿಲ್ಗಳೇ ಪರೆಯಲೆಂದುರೆ ಚಿಂತಿಸವೇಳ್ಕುಮಲ್ಲದೇ
ರವಿಗಧಿಕಪ್ರಕಾಶಗುಣವಾಗಲಿ ಯೆಂದೆನವೇಳ್ಕೆ ಯಾತ್ಮನುಂ
ಭವವಿಕೃತಾಷ್ಟಕರ್ಮವನೆ ನಷ್ಟಮನೆಯ್ದಿಪನೆಂಬುದಲ್ಲದೇ
ಶಿವಸುಖಮೆಂಬುದಂ ಬಯಸಲೇಕೆ ನಿಜಕ್ಕಪರಾಜಿತೇಶ್ವರಾ!

೯೯

ಶುದ್ಧ ನಿಜಾತ್ಮನಂ ಬಿಡದೆ ಕಾಣ್ಬ ಸುಭವ್ಯನ ಸೌಖ್ಯವೆಂಬುದಾ
ಸಿದ್ಧರ ಸೌಖ್ಯದಂಶಮೆನವೇಳ್ಕುಮಲ್ಲದೆ ನಾಗದೇವಮ
ರ್ತ್ಯೋದ್ಧತಸೌಖ್ಯದಲ್ಲಿ ಸರಿಹೋಲಿಸಲಾಗದೇಕೆ ಕರ್ಮಸಂ
ಬದ್ಧವದಿಂತಿದಸ್ತಮಲಮಪ್ಪುದರಿಂದಪರಾಜಿತೇಶ್ವರಾ!

೧೦೦

ಚಿಂತೆಯೊಳೊಂದಿದಾವ ಬರ್ದುಕುಂ ಬಹುದುಃಖಮೆ ಯೆಂಬರೆಂದುಮಾ
ಚಿಂತೆಯ ಬಾಳೊಳೇ ಬರ್ದುಕುತಿರ್ಪರದೇಕೆ ಸುಖಸ್ಥಳಾಂಧಕರ್
ಚಿಂತಿಪ ಮಾಳ್ಪ ಮಾತುಲಿವ ದಂದುಗವಿಲ್ಲದೆ ತನ್ನ ರೂಪಿನೊಳ್
ಶಾಂತದೆ ತೆಪ್ಪಗಿರ್ಪ ಬಗೆದೋರದಲಾ! ಅಪರಾಜಿತೇಶ್ವರಾ!

೧೦೧

ನೋಡಿದು ಚಿತ್ರಮೀಕ್ಷಿಸುವುದೆನ್ನ ನಿಜತ್ವಮದರ್ಕೆ ದೇಹಮ
ಲ್ಲಾಡದೆ ಕುಳ್ಳಿತಿರ್ಪ ಕೆಲಸಂ ದೊರೆಕೊಂಬುದು ಮೋಕ್ಷಮಿಂತಿದಂ
ಮಾಡುವುದರ್ಕೆ ನಾನಲಸಿ ಮೆಯ್ಮನ ಮಾತುಗಳಂ ಬಯಲ್ಗೆ ರೋ
ಡಾಡಿಸಿ ಕರ್ಮಮಂ ಕರೆವೆನಜ್ಞತೆಯಿಂದಪರಾಜಿತೇಶ್ವರಾ!

೧೦೨

ಚಿಂತಿಸವೇಳ್ಪೊಡಂ ಬಿಡದೆ ಚಿಂತಿಕೆ ದೇಹದ ಕಷ್ಟಮಂ ಸು
ಭ್ರಾಂತಿಯನೈದು ಭೇದಭವಮಂ ನವಭೇದಪದಾರ್ಥಮಂ ವ್ರತಾ
ನಂತವನರ್ಹದಾದಿಗಳನಾತ್ಮನ ಕರ್ಮದ ರೂಪನೇಕೆನಲ್
ಚಿಂತೆ ಯಿದಸ್ತಚಿಂತೆಯನೆ ಮಾಳ್ಪುದರಿಂದಪರಾಜಿತೇಶ್ವರಾ!

೧೦೩

ಅಳೆದಿರಿಸಿರ್ದುದಂ ಕುಡುವನಂತೆ ಪವಣ್ನುಡಿಯಿಂದೆ ಭವ್ಯರಂ
ತಿಳಿಪುವ ಸುಮ್ಮನಿರ್ಪ ನಿಜಕಾರ್ಯಕೆ ಪುರುಷಮೃಗಂಬೊಲುರ್ವಿಯೊಳ್
ಪೊಳೆವ ವಿವಿಕ್ತಮಂ ಪುಗುವ ಬೈತ ನಿಧಾನವನೀಕ್ಷಿಪಾತನಂ
ತೊಳಗನೆ ಕಾಣ್ಣನೇ ಸಫಲಜನ್ಮನಲಾ! ಅಪರಾಜಿತೇಶ್ವರಾ!

೧೦೪

ಮಳೆ ಸುರಿದಾಗಳೆಂತು ಪನಿ ಗಾಳಿ ಸಿಡಿಲ್ದನಿಗಳ್ಕಿ ಬಾಹ್ಯದೊಳ್
ಸುಳಿಯದೆ ದೇಹದೊಳ್ಶಿಶುಗಳಿರ್ದಪುವಂತೆಲೆ ಯೋಗಿ ನೀನುಮ
ಗ್ಗಳಿಪ ವಿಕಾರಜೃಂಭಣದ ದುಷ್ಟಮದೊಳ್ಪೊರಗಾಡಬೇಡ ಪ
ಜ್ಜಳಸುತೆ ನಿನ್ನೊಳಿರ್ದು ಜಯಿಸೆಂದೆಯಲಾ! ಅಪರಾಜಿತೇಶ್ವರಾ!

೧೦೫

ನೀಡು ದಿನಂ ನಿಜಾತ್ಮನನೆ ಭಾವಿಸಿ ಸಂಸ್ಕೃತನಾದ ಮೇಲೆ ತಾಂ
ನೋಡುವುದಲ್ಲಿಯೇ ತಿಳಿವುದಲ್ಲಿಯೆ ಪೊರ್ದುವುದಲ್ಲಿಯೇ ಪ್ರಿಯಂ
ಮಾಡುವುದಲ್ಲಿಯೇ ಸುಖಿಪುದಲ್ಲಿಯೆ ಅರ್ಚಿಪುದಲ್ಲಿಯೇ ಮರ
ಲ್ದಾಡುವುದಲ್ಲಿಯೇ ಪೊರಗೆ ಮೆಚ್ಚನಲಾ! ಅಪರಾಜಿತೇಶ್ವರಾ!

೧೦೬

ಸಿರಿಯೊಳಗಂತದೇ ಸಿರಿ ಸುಖಕ್ಕದೆ ಸೌಖ್ಯವನೇಕತತ್ತ್ವದಾ
ತಿರುಳದೆ ತಾನೆ ಕಟ್ಟಕಡೆ ಸರ್ವವಿಚಾರಕೆ ಯೆಂತನಲ್ಕೆ ಸ
ದ್ಗುರುಗಳುಮೈವರಿರ್ದರದರೊಳ್ವರದರ್ಶನಬೋಧವೃತ್ತಿಗಳ್
ಪರಮತಪಂಗಳಲ್ಲಿ ನೆಲೆಗೊಂಡುದರಿಂದಪರಾಜಿತೇಶ್ವರಾ!

೧೦೭

ಬಹುವಚನಂಗಳೇಕೆ ಭುವನತ್ರಯಸಾರಮಿದಾತ್ಮತತ್ತ್ವಮು
ತ್ಸಹಪರನಾಗಿ ತಾನದನೆ ಭಾವಿಸುತಿರ್ದೊಡೆ ಮುಕ್ತಿಯೆಯ್ದುಗುಂ
ಸಹಜಮಿದೊಂದೆ ಇನ್ನುಳಿದುವೆಲ್ಲವವೇಂ ವ್ಯವಹಾರವಾತ್ಮನಂ
ವಹಿಸಿ ಭವಂಗಳೊಳ್ಬರಿಸುತಿರ್ಪುವಲಾ! ಅಪರಾಜಿತೇಶ್ವರಾ !

೧೦೮

ಆವ ತಪಂಗಳುಂ ಶ್ರುತಮುಮಾಚರಣಂಗಳುಮಕ್ಕೆ ತನ್ನ ಚಿ
ದ್ಧಾವದ ನೋಟದೊಳ್ಪುದಿದು ಬಂದೊಡೆ ನಿರ್ಜರೆ ಮಾಳ್ಕುಮಷ್ಟಕ
ರ್ಮಾವಳಿಯಂ ಬಳಿಕ್ಕೆ ಶಿವಮಪ್ಪುದು ತಾನೆ ಯದಲ್ಲದಿರ್ದೊಡಾ
ಜೀವಕೆ ಪುಣ್ಯಬಂಧವನೆ ಮಾಳ್ಪುದಲಾ! ಅಪರಾಜಿತೇಶ್ವರಾ!

೧೦೯

ಭವ್ಯನಭವ್ಯನಿರ್ವರುಮುದಗ್ರತಪೋವ್ರತಶಾಸ್ತ್ರದೊಳ್ಸಮಾ
ನವ್ಯವಸಾಯರಪ್ಪರದರಿಂ ಸುರಸಂಪದಮಪ್ಪುದಲ್ಲದೇ
ಅವ್ಯಯಸಿದ್ಧಿಯಾಗದದು ತನ್ನಯ ಚಿತ್ತವನಾತ್ಮರೂಪದೊಳ್!
ಭವ್ಯತಪಸ್ವಿ ಯೋಜಿಸಿದೊಡಪ್ಪುದಲಾ! ಅಪರಾಜಿತೇಶ್ವರಾ!

೧೧೦

ಮನೆಯೊಳೆ ಪೂಳ್ದ ತನ್ನೊಡವೆಯುಂ ತೆಗೆದುಳ್ಕೊಡೆ ಪುಣ್ಯಮಿಲ್ಲದಂ
ಧನಿಕರ ಪೊರ್ದಿ ಬೇಡಿದೊಡೆ ಈವರೆ ಇತ್ತೊಡುಣಲ್ಕೆ ಸಾಲ್ವನೇ
ತನುವಿನೊಳಿರ್ದ ತನ್ನನುರೆ ಕಾಣ್ಬೊಡೆ ಭವ್ಯತೆಯಿಲ್ಲದಿರ್ದವಂ
ಮುನಿಮತವೆಯ್ದಿಯುಂ ಶಿವವನೆಯ್ದುವನೇ! ಅಪರಾಜಿತೇಶ್ವರಾ!

೧೧೧

ಅಶುಭಶುಭಂಗಳೆಂಬೆರಡು ಯೋಗಮಿವವ್ರತಸುವ್ರತಂಗಳೊಳ್
ವಿಶದಮಿವಿಂತು ಸಂಸ್ಕೃತಿಯ ಮಾಳ್ಪುವು ದುಃಖಸುಖಸ್ವರೂಪದೊಳ್
ಅಶುಭವನೊಲ್ಲದಾ ಶುಭದೊಳಿರ್ದದನುಂ ತೊರೆದಾತ್ಮನೊಳ್ಮನೋ
ವಶನೆನೆ ಶುದ್ಧಯೋಗಮಿದು ಸಿದ್ಧಿಯಲಾ! ಅಪರಾಜಿತೇಶ್ವರಾ!

೧೧೨

ವ್ರತತತಿಯಿಲ್ಲದಂದು ಪವಣಿಲ್ಲ ಮನಕ್ಕದರಿಂದೆ ಪಾಪಮಾ
ವ್ರತತತಿಯುಳ್ಳೊಡಂತದನೆ ಪಾಲಿಪೆನವ್ರತಮಂ ಕೆಡಿಪ್ಪೆನೆಂ
ಬತಿಮತಿಯುಳ್ಳಿನಂ ಸುಕೃತಮಕ್ಕುಮದುಂ ಭವಬೀಜಮೀ ಮನಃ
ಕ್ಷತೆ ಕಿಡೆ ತನ್ನೊಳಿರ್ದೊಡೆ ಸಿದ್ಧಿಯಲಾ! ಅಪರಾಜಿತೇಶ್ವರಾ!

೧೧೩

ಅಧ್ಯಯನಂಗಳಿಂ ವ್ರತಚಿಂತನೆಯಿಂ ಸ್ತುತಿಯಿಂ ಪ್ರಬೋಧೆಯಿಂ
ಸಾಧ್ಯಮನಸ್ಕನಾಗಿ ನಿಜರೂಪನಪ್ಪಿದವಂಗೆ ಬೇರೆ ಮ
ತ್ತಧ್ಯಯನಾದಿಗಳ್ಮೆರೆಯವಾದ ವಿಕಲ್ಪಮುಮಿಲ್ಲ ಲೋಕಕಾ
ರಾಧ್ಯನವಂಗೆ ಪೂಜ್ಯಗುಣರಿಲ್ಲವಲಾ! ಅಪರಾಜಿತೇಶ್ವರಾ!

೧೧೪

ಪಗರಣದಾಟಮೆಂದು ಜಗಮಂ ಸಲೆ ನೋಡುತೆ ದುರ್ವಿಕಲ್ಪಮಂ
ತೆಗೆದು ಬಿಸಾಡುತಂ ನಿಜಚಿದಾತ್ಮನನೀಕ್ಷಿಸುತಂ ವಿಶೋಧಿಯೊಳ್
ಮಿಗೆ ಮುಳುಗಾಡುತಂ ಶಮರಸಾಮೃತಮಂ ಸವಿಯುತ್ತೆ ತನ್ನ ತಾ
ನಗುತೆ ವಿಳಾಸದಿಂ ತಪಿಸುವಂಗೆಣೆಯಾರಪರಾಜಿತೇಶ್ವರಾ!

೧೧೫

ಮೂರು ಶರೀರದೊಳ್ತಡೆಯದಂತರದಾತ್ಮನೊಳೈಕ್ಯವಾಗಿ ಬಂ
ದೇರುವ ದುಷ್ಪರೀಷಹವದಂಗಕೆನುತ್ತುಪಶಾಂತನಪ್ಪು ದುಂ
ಜಾರುಗುಮೊಯ್ಯನೊಯ್ಯನೆ ಚಿದಾವರಣಾದಿಗಳಾತ್ಮಸಿದ್ಧಿ ಮೆ
ಯಯೋರುಗುಮೊಯ್ಯನೊಯ್ಯನಿದೆ ಯುಕ್ತಿಯಲಾ! ಅಪರಾಜಿತೇಶ್ವರಾ!

೧೧೬

ನೋಡುವ ನೋಡಿ ಲಾಲಿಸುವ ಲಾಲಿಸುತಾತ್ಮ ಸುಖಕ್ಕೆ ವಿಸ್ಮಯಂ
ಮಾಡುವ ಮಾಡಿ ಮೆಚ್ಚುವ ನಿಜಾತ್ಮನೊಳಾಗಲೆ ಮೆಚ್ಚುತೈಕ್ಯದಿಂ
ಕೂಡುವ ಕೂಡಿ ಮೆಯ್ಮರೆವ ತನ್ಮಯನಾಗುತೆ ತಾನೆ ತನ್ನೊಳೋ
ಲಾಡುವ ಜೋಗಿಯೇ ಅಮೃತಭಾಗಿಯಲಾ! ಅಪರಾಜಿತೇಶ್ವರಾ!

೧೧೭

ಇಂಗಡಲೊಳ್ಮುಳುಂಗಿದವೊಲಿರ್ಪುದು ಮೇಘವಡಂಗಿದಚ್ಚವೆ
ಳ್ದಿಂಗಳ ಕಾಂತಿಯೊಳ್ಬೆರಸಿದಂತೆವೊಲಿರ್ಪುದು ಸಿದ್ಧರಾಶಿಯೊಳ್
ಸಂಗತವಾದ ವೊಲ್ಮೆರೆವುದಾತ್ಮನೋಳಾತ್ಮನನಾತ್ಮನಿಂದೆ ಕಂ
ಡಂಗರಿಪಂದದಿಂ ನುಡಿಯಲೆನ್ನಳವೇ! ಅಪರಾಜಿತೇಶ್ವರಾ!

೧೧೮

ಅವನ ಬರ್ದುಂಕೆ ತಾಂ ಬರ್ದುಕು ಜನ್ಮವದೇ ಸಫಲಂ ವಿಶಿಷ್ಟಲಾ
ಭವುಮದೆ ಸರ್ವಸಿದ್ದಿಗದು ಮೊತ್ತಮೊದಲ್ಸುವಿಚಾರಕೋಟಿಗೆ
ಲ್ಲವರೊಳದೊಂದೆ ಕಟ್ಟಕಡೆ ತನ್ನೊಳೆತನ್ನನೆ ತಾನೆ ಕಂಡು ಬಾ
ಹ್ಯವನುಳಿದಿರ್ದವಂಗೆ ಭವವೆತ್ತಣದಿನ್ನಪರಾಜಿತೇಶ್ವರಾ!

೧೧೯

ತನುವಿನೊಳಿರ್ದ ಸಿದ್ಧಸದೃಶಾತ್ಮನನೀಕ್ಷಿಸುತಂ ವಿಶೋಧಿ ಸಂ
ಜನಿತದೊಳೇನನಾಡಿದನದೆಲ್ಲವುಮಾಗಮಮೆಲ್ಲರಿಚ್ಛೆ ಹೆ
ಚ್ಚಿನ ಕಳೆ ಕರ್ಮನಿರ್ಜರೆ ಜಗತ್ತ್ರಯವಲ್ಲಭನಪ್ಪ ಕಜ್ಜವಿ
ನ್ನಿನಿತಿನಿತೆಂದದರ್ಕೆ ಮಿತಿಮಾಡುವರಾರಪರಾಜಿತೇಶ್ವರಾ!

೧೨೦

ರವಿ ನಡೆದತ್ತಲೆಲ್ಲ ಬೆಳಗಲ್ಲದೆ ಕತ್ತಲೆಯುಂಟೆ ಯಾತ್ಮತ
ತ್ತ್ವವೆ ಮನದಲ್ಲಿ ನಟ್ಟು ನುಡಿವಾತನ ಮಾತುಗಳೆಲ್ಲ ಮೋಕ್ಷಮಾ
ರ್ಗವೆ ಯವನೆಲ್ಲಿ ನಿಂದನದು ತೀರ್ಥವವಂ ನಡೆದು ಸರ್ವರು
ತ್ಸವಮಿದು ನಿನ್ನ ಮಾರ್ಗದ ರಹಸ್ಯವಲಾ! ಅಪರಾಜಿತೇಶ್ವರಾ!

೧೨೧

ಆರಿದನೊಲ್ದು ಕೈ ವಿಡಿದರಾರಿದನೀಕ್ಷಿಸಿದರ್ ಯಥಾರ್ಥದಿಂ
ದಾರಿದರಲ್ಲಿಯೇ ಲಯವನೆಯ್ದಿ ನಿಜಂಬಡೆದರ್ ಜಗಕ್ಕಿದಂ
ಆರನುಶಾಸನಂಗೊಳಿಸಿದ‌ರ್ ಜಿನ ನೀನೆ ಜಗತ್ತ್ರಯೈಕವಿ
ಸ್ತಾರಿತವಸ್ತುವಂ ಬೆಳಗಿದೈ ಕೃಪೆಯಿಂದಪರಾಜಿತೇಶ್ವರಾ!

೧೨೨

ಚೆಲುವರ ಚೆಲ್ವ ಚೆನ್ನಿಗರ ಚೆನ್ನ ಸುವೀರರ ವೀರ ಸತ್ಕಲಾ
ಬಲರ ಬಲಾಢ್ಯ ಬಲ್ಲಿದರ ಬಲ್ಲಹ ದೇವರ ದೇವ ನೀತಿನಿ
ರ್ಮಲರ ನಿಧಾನ ನಿಚ್ಚ ಮದವಕ್ಕಳ ಮಾಣಿಕಕಾಂತಿ ಶಾಂತಿ ಶೀ
ತಲರ ಶಿರೋಮಣೀ ನಿನಗೆ ಪಾಸಟಿಯಾರಪರಾಜಿತೇಶ್ವರಾ!

೧೨೩

ಜಡಮತಿಯೈಸೆ ನಾಂ ಪರಮ ನಿನ್ನ ಗುಣಂಗಳನೆಲ್ಲಮಂ ಮನಂ
ಬಿಡಿಯೆ ಸಮರ್ಥನಲ್ಲೆನದರಿಂ ಕಿರಿದಂ ಪಿಡಿದಿರ್ಪೆನೆಂತೆನಲ್
ಕೊಡದೊಳಗೆಷ್ಟು ನಿಲ್ವುದು ಸಮುದ್ರಜಲಂ ವರಕಾಂಚನಾದ್ರಿ ಕ
ನ್ನಡಿಯೊಳಗೆಷ್ಟು ತೋರ್ಪುದವಧಾರಿಸು ನೀನಪರಾಜಿತೇಶ್ವರಾ!

೧೨೪

ಬಂದೊಲವಿಂದೆ ನಿನ್ನಿದಿರೊಳೊಪ್ಪದೆ ನಿಂದು ಕರಂಗಳಂ ನೊಸ
ಲ್ಗೊಂದಿಸಿ ದೇವದೇವ ಕರುಣಾಕರ ಬಿನ್ನಪವಾತ್ಮಸಿದ್ಧಿಯಿ
ನ್ನೆಂದೆನಗಪ್ಪುದೆಂದೊಡೆಲೆ ಕಂದ ಕಡಂಗದಿರಿಂದು ನಾಳೆ ಯೆ
ಮ್ಮಂದವೆ ಯಪ್ಪೆಯೆಂಬ ನುಡಿಗೇಳ್ವೆನದೆಂದಪರಾಜಿತೇಶ್ವರಾ!

೧೨೫

ಮುನ್ನ ಮನೇಕರಂ ಭವದಿನೆತ್ತಿ ಯಶೋನಿಧಿಯಾದೆ ಯಾದೊಡೇಂ
ನಿನ್ನ ದಯಾಗುಣಕ್ಕದು ವಿಶೇಷಮೆ ಮೂರ್ಖನನಾರ್ತರೌದ್ರನಂ
ನನ್ನ ಪವಿತ್ರ ಮಾಡಿದೊಡೆ ದೊಡ್ಡ ಪೆಸರ್ಘನಕೀರ್ತಿ ದೇವ ಭೂ
ತೆನ್ನದಿರೊಪ್ಪುಗಳ್ನಗದಿರೈ ಶರಣಾಗಪರಾಜಿತೇಶ್ವರಾ!

೧೨೬

ಶ್ರೀಶುಭವೆತ್ತ ಮೇರುನಗದಿಂದ್ರದಿಶಾಸ್ಥಿತವತ್ಸಕಾವತೀ
ದೇಶದೊಳಿರ್ದಪೈ ವಿಜಿತಘಾತಿಚತುಷ್ಕ ಜಗತ್‌ತ್ರಯಾರ್ಚಿತಾ
ಲೇಶಮದಾದೊಡಂ ಪುದಿದ ಪುದ್ಗಲದಲ್ಲಿರಲಾರೆನಯ್ಯ ಸ
ರ್ವೇಶ ಶರಣ್ಯ ಗಣ್ಯ ತಳುವೇಂ ಶರಣಾಗಪರಾಜಿತೇಶ್ವರಾ!

೧೨೭

ತ್ರಿಜಗತ್ಸ್ವಾಮಿಗಳಿರ್ದಪರ್ಧರೆಯೊಳೀಗಳ್ದೂರವಲ್ಲಿರ್ದೊಡೀ
ವಿಜಯಾರ್ಧಂ ಹಿಮವದ್ವಯಂ ನಿಷಧಮೆಂಬೀ ನಾಲ್ಕು ಪೆರ್ಗೊಡೆಗಳ್
ಪ್ರಜೆಗಡ್ಡೈಸಿದವೈಸೆ ಕಾಣ್ಬಿರಿಮಡರ್ತಾರಾಧನಂ ಮಾಡಿರೋ
ನಿಜದಿಂದೆಮ್ಮಪರಾಜಿತೇಶ್ವರನುಮಂ ಶ್ರೀ ಮಂದರಸ್ವಾಮಿಯಂ

೧೨೮

                                                           ಗದ್ಯ
                    ಶ್ರೀ ಮದ್ದೇವೇಂದ್ರಕೀರ್ತಿಯೋಗೀಶ್ವರಪಾದಾಂಭೋಜಭೃಂಗಾಯಮಾನ
                    ಶೃಂಗಾರಕವಿಹಂಸರಾಜವಿರಚಿಮಪ್ಪ ಅಪರಾಜಿತೇಶ್ವರ ಸಪಾದಶತಕಂ
                                                      ಸಮಾಪ್ತಂ.