EN | KA

IX

Hadibadeya Dharma

ಆವನಾಣತಿಯೂಳಿಗ ಕರ್ಮಯೋಗ ಮ
ತ್ತಾವನ ನೆನಹು ವಿಜ್ಞಾನ
ಆವನೊಳೆರಕ ಭಕುತಿಯಾ ಪರವಾಸು
ದೇವನಿಗಾನೆರಗುವೆನು

ಜ್ಞಾನ ವೈರಾಗ್ಯ ಶ್ರೀಹರಿಭಕ್ತಿ ಸತ್ಕರ್ಮ
ಹೀನರನೆಮ್ಮನಾರೈದು
ಆ ನಾರಾಯಣನಡಿಗೆರಗಿಪ ಸಿರಿ
ಗಾನತಿಗೈದು ಬಾಳುವೆನು

ಪತಿಪಾದಭಕ್ತೆಯರೆನಿಪ ಸತಿಯರು ತಾ
ವತಿಶಯ ಗತಿಗೆಳಸಿದೊಡೆ
ಇತರ ಚಿಂತೆಯನುಳಿದೇಕಚಿತ್ತದೊಳು ಶ್ರೀ
ಪತಿಪಾದವನೆ ಭಜಿಸುವುದು

ಆವ ದೇವರನಾವರು ಭಜಿಸುವರಾ
ದೇವರನವರು ಸೇರುವರು
ಆವ ಭೋಗದೊಳಾ ದೇವರಿರ್ಪರು ತಾ
ವಾ ವಿಧದೊಳು ಬಾಳುವರು

ಶ್ರೀವರನಡಿಯ ಸೇರಿದರನುಳಿದ ಮಿಕ್ಕ
ದೇವಲೋಕವನೇರಿದವರು
ದೇವರೊಡನೆ ತಾವುಮಳಿವರೆಂಬುದನು ಗೀ
ತಾವಚನದೊಳು ತಿಳಿವುದು

ಅದೆಂತೆನೆ :
ಶ್ಲೋಕ ಆಬ್ರಹ್ಮಭುವನಾಲ್ಲೋಕಾಃ
    ಪುನರಾವರ್ತಿನೋ೭ರ್ಜುನ
    ಮಾಮುಪೇತ್ಯ ತು ಕೌಂತೇಯ
    ಪುನರ್ಜನ್ಮ ನ ವಿದ್ಯತೇ ||
        ಭಗವದ್ಗೀತಾ : ಅಧ್ಯಾಯ ೮, ಶ್ಲೋಕ ೧೬

ಪರಹಿಂಸೆಯೆಸಗದೆ ಪರಧನಕಳುಪದೆ
ಪರಪುರಷಂಗಾಸೆವಡದೆ
ಸಿರಿಯರಸನ ಪಾದಸೇವೆಗೈದವರಾ
ಪರಮಪದವನು ಸೇರುವರು

ಚಾಡಿವೇಳದೆ ಚಂಡಿತನವೆಸಗದೆ ಚುನ್ನ
ವಾಡದೆ ಜರಿದು ನುಡಿಯದೆ
ಕೇಡೆಣಿಸದೆ ಕೆಲರಿಗೆ ಹರಿಪದಸೇವೆ
ಗೀಡಾಗಿ ಗತಿಯ ಪಡೆವುದು

ಸೇರುವುದಿಹಪರಗತಿ ನಾರಾಯಣ
ನಾರಾಧನೆಯೊಳೆಲ್ಲರಿಗೆ
ಆರಯ್ಯೆ ಸಕಲ ಸತ್ಕರ್ಮಂಗಳಚ್ಯುತ
ನಾರಾಧನೆಯೆನಿಸುವುವು

ಇದನಾಚರಿಸುವುದಿದನುಳಿದಿರ್ಪುದೆಂ
ಬುದನಾರೈದು ಶಾಸ್ತ್ರದೊಳು
ಎದೆಗೊಳುವಂತೆ ಪೇಳುವ ಪಿರಿಯರ ದಿವ್ಯ
ಪದಸೇವೆಗೈದು ಬಾಳುವುದು

ಇದನಾಚರಿಸಿದೊಡೀ ಫಲವಪ್ಪುದೆಂ
ಬುದು ಕಾಮ್ಯಕರ್ಮವೆನಿಪುದು
ಮುದದಿಂದ ಮುಕುತಿಯನೆಳಸುವ ಕೋ
ವಿದರ ಹಂಬಲನು ಬಿಟ್ಟಿಹುದು

೧೦

ಆವುದನೆಸಗದಿರ್ದೊಡೆ ಪಾಪವಾ ಕರ್ಮ
ಭಾವಿಸೆ ನಿತ್ಯವೆನಿಪುದು
ಆವ ವಿಧದೊಳಾದೊಡಮಾ ಕರ್ಮವ
ನಾವಗಮಾಚರಿಸುವುದು

೧೧

ಈ ನಿಮಿತ್ತದೊಳಿದನೆಸಗುವುದೆಂಬುದು
ತಾನೈಸೆ ನೈಮಿತ್ತಕರ್ಮ
ಆ ನಿಮಿತ್ತದೊಳಾಚರಿಸುವುದೆಲ್ಲರು
ಮಾ ನೈಮಿತ್ತಕರ್ಮವನು

೧೨

ಇಂತು ಮುಕ್ತಿಯನೆಳಸುವ ಕಾಮ್ಯವನುಳಿ
ದಂತರಂಗದ ಶುದ್ಧಿಯೊಳು
ಚಿಂತೆಗೊಳದೆ ನಿತ್ಯ ನೈಮಿತ್ತಕರ್ಮವ
ಸಂತಸದೊಡನೆಸಗುವುದು

೧೩

ಇದು ಜಗದೀಶ್ವರನಾಜ್ಞೆಯೆನಗೆ ತಾ
ನಿದನಾಚರಿಸಬೇಕೆಂದು
ಮುದದೊಡನೊಡರಿಪರಿಗೆ ಮೋಸವಿಲ್ಲೆಂ
ಬುದನರಿವುದು ಗೀತೆಯೊಳು

೧೪

    ಶ್ಲೋ|| ನೇಹಾಭಿಕ್ರಮ ನಾಶೋsಸ್ತಿ
    ಪ್ರತ್ಯವಾಯೋ ನ ವಿದ್ಯತೇ |
    ಸ್ವಲ್ಪಮಪ್ಯಸ್ಯ ಧರ್ಮಸ್ಯ
    ತ್ರಾಯತೇ ಮಹತೋ ಭಯಾತ್‌ ||
                ಭಗವದ್ಗೀತಾ : ಅಧ್ಯಾಯ ೨, ಶ್ಲೋಕ ೪೦

ಈಯೆಸಕದೊಳಿರೆ ಶೂದ್ರರಾದೊಡಮಾ
ಸ್ತ್ರೀಯರಾದೊಡಮೇನವರು
ಆ ಯೋಗಿಗಳಡರುವ ಪರಗತಿಗೆ ತಾ
ವಾಯಾಸವಿಲ್ಲದೇರುವರು

೧೫

    ಇಂತಪ್ಪುದಕ್ಕಂ ಗೀತಾವಚನಂ :
    ಶ್ಲೋ || ಸ್ತ್ರೀಯೋವೈಶ್ಯಾಸ್ತಥಾ ಶೂದ್ರಾ
    ಸ್ತ್ರೇsಪಿಯಾಂತಿ ಪರಾಂಗತಿಮ್ ||
                ಭಗವದ್ಗೀತಾ : ಅಧ್ಯಾಯ ೯, ಶ್ಲೋಕ ೩೨

ಶುಚಿಯಾಗಿರೆ ದೇವತೆಗಳು ಸಲಹುವರು
ಶುಚಿಯನು ಪಿತೃಗಳೋವುವರು
ಶುಚಿಗಂಜುವುವು ಪ್ರೇತ ಭೂತಗಳದರಿಂದ
ಶುಚಿಯಪ್ಪುದೆಲ್ಲ ವೇಳೆಯೊಳು

೧೬

ಪಿರಿಯರ ನಿಟ್ಟಿಸಿದೊಡನೆ ಪೋಪುದು ಭೀತಿ
ಪರಿದೋಡುವುವು ಪಾಪಗಳು
ಇರದದರಿಂದ ಶ್ರೀ ಹರಿಶರಣರ ದಿವ್ಯ
ಚರಣದ‍ರ್ಶನವೆಸಗುವುದು

೧೭

ಪರಮ ವಿಶ್ವಾಸವೆರಸಿ ವಿಷ್ಣು ವೈಷ್ಣವ
ಚರಣತೀರ್ಥವ ಸೇವಿಸಿದೊಡೆ
ಪರಿದೋಡುವುವು ಸಕಲ ಪಾಪಂಗಳು
ಪರಮಪದವಿ ಬಸವಹುದು

೧೮

ತಿಳಿಯೆ ಮಾನುಷಲೋಕದಿಂದಾ ಜವನೂರ
ಬಳಿಗೈದುವ ಪೆರ್ಬಟ್ಟೆ
ಉಳಿದೆಂಬತ್ತೆಂಟು ಸಾಸಿರ ಗಾವುದ
ದಳತೆಯ ನೀಟವೆನಿಪುದು

೧೯

ಊರು ಕೇರಿಗಳಿಲ್ಲ ಒರ್ವರ ನೆರವಿಲ್ಲ
ನೀರು ನೆಳಲು ತಾನಿಲ್ಲ
ಸೇರಿ ನಿಲುವದೊಂದು ಠಾವಿಲ್ಲವೆನಲಾ
ದಾರಿಯನೇವೇಳುವುದು

೨೦

ಪುರಿದಂತೆ ಬೇವುರಿ ಮಳಲ ರಾಶಿಗಳಿಂದ
ಹರಹಿದ ಮುಳ್ಳುಗಳಿಂದ
ಪರಿಪರಿ ಗೋರುಕಲ್ಲುಗಳಿಂದ ಪಜ್ಜೆಯ
ನುರಿಗೊಳಿಸುವುದೊಡನೊಡನೆ

೨೧

ಆರಯ್ಯೆ ದಾನವೀಯದ ಪಾಪಗಳೀ
ದಾರಿವಿಡಿದು ನಡೆತಿಹರು
ಭೂರಿದಾನಗಳತ್ತ ಪುಣ್ಯಪುರುಷರೀ
ದಾರಿಯೊಳಿಡರಡಿಗಳನು

೨೨

ಪೊಡವಿಯ ಪಾಸಿಕಗಳನುಂಬ
ಕುಡಿನೀರ ತುರು ಕುದುರೆಗಳ
ಉಡೆಗಳನೊಳ್ಮಣಿಗಳನೊಲಿದೀವುದು
ಪಡೆವುದು ಪರಮಗತಿಗಳನು

೨೩

ಅಲಸದೆ ಮುಕ್ತಿಯನಾಸೆವಡುವರನ್ಯ
ಫಲವ ಬಯಸಿ ಬಣ್ಣಗೆಡದೆ
ನೆಲೆಗೊಂಡ ನಿಜಧರ್ಮದ ನೇಮವಳಿಯದೆ
ಪಲವು ದಾನವ ಪಣ್ಣುವುದು

೨೪

ತಾಳಿಗೆಯೊಣಗದ ಮುನ್ನಮೆ ನಾಲಗೆ
ಬೀಳದ ಮುನ್ನಮೆ ಬೇಗ
ಪೇಳುವುದಂಬುಜಾಕ್ಷನ ಪೆಸರುಗಳನು
ಪೇಳಲರಿಯದೊಡಾಲಿಪುದು

೨೫

ಶ್ರೀವಿಷ್ಣುಭಕ್ತಿಯಿಂದತಿವೇಗದೊಳು ದುಃ
ಖಾವಳಿಯಳಿವುದೆಂಬುದಕೆ
ಭಾವಿಸೆ ಭಾಗವತದೊಳೊಂದು ಕಥೆಯುಂ
ಟಾ ವಿಧವನು ಬಣ್ಣಿಪೆನು

೨೬

ತಕ್ಷಕನಿಂದ ತನಗೆ ಅಳಿವಪ್ಪುದಿ
ನ್ನಕ್ಷಯಗತಿಗೊಂಬೆನೆಂದು
ಆ ಕ್ಷಣದೊಳು ಶುಕಮುನಿಯಡಿಗೆರಗಿ ಪ
ರೀಕ್ಷಿತನಿಂತು ಕೇಳಿದನು

೨೭

ಸಾವಡಸಿದ ಸಮಯದೊಳು ಸದ್ಗತಿಗಾಗಿ
ಯಾವುದನೊಲಿದಾಲಿಪುದು
ಆವುದನೋದುವುದಾವುದನೊಡರಿಪು
ದಾವುದನಿರದೆ ನೆನೆವುದು

೨೮

ಇಂತು ನುಡಿದ ಪರೀಕ್ಷಿತರಾಯಗೆ ಮಿಗೆ
ಸಂತಸವನು ಸಮನಿಸುತ
ತಾಂ ತಿಳಿದಖಿಲಶಾಸ್ತ್ರದ ತತ್ವಮನೋ
ರಂತರುಹಿದನಾ ಯೋಗಿ

೨೯

ಅರಸ ಕೇಳಾಪತ್ತಡಸಿದ ವೇಳೆಗೆ
ಹರಿಕಥೆಗಳನೆ ಕೇಳುವುದು
ಹರಿನಾಮಂಗಳನೊಲಿದೋದುವುದು ಶ್ರೀ
ಹರಿಪದಂಗಳನೆ ನೆನೆವುದು

೩೦

ಹರಿಪಾದಪದ್ಮದ ಸೇವೆಯಿಲ್ಲದೆ ಪಲ
ವರಿಸಮಿದ್ದೊಡೆ ಫಲವೇನು
ಮುರವೈರಿಯ ನೆನೆದೊಂದು ಮುಹೂರ್ತಕೆ
ಪರಗತಿ ಬಯಸಿದಂತಹುದು

೩೧

ಅಂದು ಖಟ್ವಾಂಗನೆಂಬರಸು ತಾನಳಿವುದ
ಕೊಂದು ಮುಹೂರ್ತದಳರಿತು
ಕುಂದದೆ ಭಜಿಸಿ ಮುಕುಂದನ ಚರಣವ
ಸಂದನು ಪರಮಪದವಿಗೆ

೩೨

ಏಳೆಲೆ ಭರತವಂಶಾಗ್ರಣಿ ಬೇಗದೊ
ಳೇಳು ಭಜಿಸು ಮಾಧವನ
ಏಳು ದಿವಸದಾಯುವಿರ್ಪುದು ನಿನಗಿ
ನ್ನಾಳೋಚನೆಯೇತಕಿದಕೆ

೩೩

ಈ ವಿಧದೊಳು ಪೇಳಿದ ಶುಕಮುನಿಗೆ ಪ
ದಾವನತಿಯನಾಚರಿಸಿ
ಭಾವಶುದ್ಧಿಯೊಳು ಭಾಗವತವ ಕೇಳಿಯಂ
ದಾ ವಿಷ್ಣುಪದವನೈದಿದನು

೩೪

ಆರಯ್ಯೆ ವಿಷ್ಣುಪುರಾಣ ರಾಮಾಯಣ
ಭಾರತ ಭಾಗವತಗಳ
ಆರು ಪಿರಿಯರಿಂದಾಲಿಪರವರಿಗೆ
ಸೇರುವುವಖಿಳ ಸಿದ್ಧಿಗಳು

೩೫

ಇದಕೆ ಸಮ್ಮತಿ ವಚನಂಗಳು ಪಲವುಂ
ಟದರೊಳೊಂದೆರಡನೋದುವೆನು
ಅದರರ್ಥಂಗಳನೆಲ್ಲರುಮರಿವಂತೆ
ಪದರಚನೆಯೊಳು ಬಣ್ಣಿಪೆನು

೩೬

ಶ್ರೀ ಭಾಗವತೇ ಪ್ರಥಮಸ್ಕಂದೇ, ಪ್ರಥಮೋಧ್ಯಾಯೇ
ಶ್ಲೋ || ಧರ್ಮಃ ಪ್ರೋಜ್ಝಿತ ಕೈತವೋತ್ರ
    ಪರಮೋ ನಿರ್ಮತ್ಸರಾಣಾಂ ಸತಾಂ |
    ವೇದ್ಯಂ ವಾಸ್ತವಮತ್ರ ವಸ್ತು
    ಶಿವದಂ ತಾಪತ್ರಯೋನ್ಮೂಲನಂ ||

ಶ್ರೀಮದ್ಭಾಗವತೇ ಮಹಾಮುನಿಕೃತೇ
ಕಿಂ ವಾ ಪರೈರೀಶ್ವರಃ |
ಸದ್ಯೋ ಹೃದ್ಯವರುಧ್ಯತೇತ್ರ
ಕೃತಿಭಿಃ ಶುಶ್ರೂಷುಭಿಸ್ತತ್‌ಕ್ಷಣಾತ್‌ ||

ವೇದವ್ಯಾಸನಣುಗನಾ ಶುಕಮುನಿ
ಯಾದರದಿಂದನುಗೈದ
ವೇದ ತತ್ವಾರ್ಥಮೆನಿಪ ಭಾಗವತವ
ನಾದರದಿಂದಾಲಿಪುದು

೩೭

ಮದ ಮತ್ಸರಂಗಳಡಗಿದ ಮಹಾತ್ಮರ
ಸದಮಳ ಧರ್ಮವಿದರೊಳು
ಇದು ತಾಪತ್ರಯಹರವಿದನಾಲಿಪ
ರೆದೆಯೊಳು ಹರಿ ನೆಲಸುವನು

೩೮

ಶ್ರೀ ವಿಷ್ಣು ಪುರಾಣೇ ಷಷ್ಠೇ ಅಂಶೇ ಚರಮೇ ಅಧ್ಯಾಯೇ
ಶ್ಲೋ || ಪುರಾಣಂ ವೈಷ್ಣವಂ ಚೈತತ್‌
ಸರ್ವಕಿಲ್ಬಿಷನಾಶನಂ |
ವಿಶಿಷ್ಟಂ ಸ‍ರ್ವಶಾಸ್ತ್ರೇಭ್ಯಃ
ಪುರುಷಾರ್ಥೋಪಪಾದಕಂ ||

೩೯

ಯತ್ರಾದೌ ಭಗರ್ವಾ ಚರಾಚರ
ಗುರುರ್ಮಧ್ಯೇ ತಥಾಂತೇ ಚ ಸಃ |
ಬ್ರಹ್ಮಜ್ಞಾನಮಯೋಚ್ಯುತೋಖಿಲಂ
ಜಗನ್ಮಧ್ಯಾಂತ ಸರ್ಗಪ್ರಭುಃ ||

೪೦

ತಚ್ಛೃಣ್ವನ್ಪುರುಷಃ ಪವಿತ್ರ
ಪರಮಂ ಭಕ್ತ್ಯಾ ಫಠನ್ಧಾರಯನ್‌ |
ಪ್ರಾಪ್ನೋತ್ಯಸ್ತಿನತತ್ಸಮ
ಸ್ತ್ರೀಭುವನೇಷ್ವೇಕಾಂತಸಿದ್ಧಿರ್ಹರಿಃ ||

೪೧

ಇದನು ಶ್ರೀ ವಿಷ್ಣುಪುರಾಣವೆಂಬರು ಮ
ತ್ತಿದರಿಂದ ಪಾಪ ಪರಿವುದು
ಇದು ಸರ್ವಶಾಸ್ತ್ರದೊಳೊತ್ತಮವೆನಿಸುವು
ದಿದು ಸರ್ವಫಲವ ಸಾಧಿಪುದು

೪೨

ಆದಿ ಮಧ್ಯಾಂತರಹಿತನಚ್ಯುತನಿದ
ರಾದಿ ಮಧ್ಯಾಂತದೊಳಿಹನು
ಈ ದಿವ್ಯ ವಿಷ್ಣುಪುರಾಣವ ಕೇಳುವ
ರಾ ದೇವನಡಿಯ ಸೇರುವರು

೪೩

ಶ್ರೀ ಮದ್ರಾಮಾಯಣೇ ಯುದ್ಧಕಾಂಡೇ ಚರಮಸ್ಸರ್ಗೇ
ಶ್ಲೋ|| ರಾಮಾಯಣಮಿದಂ ಕೃತ್ಸ್ನಂ
ಶೃಣ್ವತಃ ಪಠತಸ್ಸದಾ |
ಪ್ರೀಯತೇ ಸತತಂ ರಾಮ
ಸ್ಸಹಿವಿಷ್ಣುಸ್ಸನಾತನಃ ||

ಪಾಪಾನ್ಯಪಿ ಚಯಃ ಕೃತ್ವಾ
ಅಹನ್ಯಹನಿ ಮಾನವಃ
ಪಠತ್ಯೇಕಪಿಶ್ಲೋಕಂ
ಪಾಪಾತ್ಸಪರಿಮುಚ್ಯತೇ ||

ಈ ರಾಮಾಯಣವೆಲ್ಲವನೆಡೆವಿಡ
ದಾರೈದು ತಿಳಿದೋದುವರನು
ಶ್ರೀರಾಮಚಂದ್ರನೊಲಿದು ಸಲಹುವನಾದಿ
ನಾರಾಯಣನವನೈಸೆ

೪೪

ಒಂದು ಸರ್ಗಮನೊಂದು ಪದ್ಯಮನಲ್ಲದೊ
ಡೊಂದು ಪಾದವನೋದಿದೊಡೆ
ಅಂದಂದಿನೊಳೆಸಗಿದ ಪಾಪಂಗಳಂ
ದಂದಿಗೆ ಪರಿಹರಿಸುವುವು

೪೫

ಶ್ರೀ ಮಹಾಭಾರತೇ ಸ್ವರ್ಗಾರೋಹಣ ಪರ್ವಣಿ ಚರಮೇ ಅಧ್ಯಾಯೇ
ಶ್ಲೋಕ || ಕಾರ್ಷ್ಣಂ ವೇದಮಿಮಂ ಸರ್ವಂ
ಶೃಣುಯಾದ್ಯಸ್ಸಮಾಹಿತಃ |

ಬ್ರಹ್ಮಹತ್ಯಾ ಕೃತಂ ಪಾಪಂ
ತತ್‌ಕ್ಷಣಾದೇವ ನಶ್ಯತಿ ||

ಅಹ್ನಾ ಯದೇನಃ ಕುರುತೇ
ಇಂದ್ರಿಯೈರ್ಮನಸಾ ಗಿರಾ |
ಮಹಾಭಾರತಮಾಖ್ಯಾಯ
ಸರ್ವಪಾಪೈಃ ಪ್ರಮುಚ್ಯತೇ ||

ವೇದವ್ಯಾಸನೊಲಿದು ಪೇಳಿದ ಪೊಸ
ವೇದವೆನಿಪ ಭಾರತವನು
ಓದಿದ ಮಾತ್ರದೊಳಳಿವುವು ಬ್ರಹ್ಮಹ
ತ್ಯಾದಿ ಮಹಾಪಾತಕಗಳು

೪೬

ನಡೆ ನುಡಿ ನೆನಹುಗಳಂದಂದಿಂದನೊ
ಳೊಡರಿಸುವುಗ್ರ ಪಾಪಗಳು
ಅಡಗುವುವಂದಂದಿಗೆ ಭಾರತದೊಂದು
ನುಡಿಯನೋದಿದ ಮಾತ್ರದೊಳು

೪೭

ಇಂತು ನಡೆವ ನಿತ್ಯ ನೈಮಿತ್ತಕರ್ಮ ಶ್ರೀ
ಕಾಂತನೂಳಿಗವೆಂದು ತಿಳಿದು
ಸಂತಸದಿಂದಾಚರಿಸೆ ಸತಿಯರಿಗೆ
ಚಿಂತಿತ ಫಲ ಸೇರುವುದು

೪೮

ಗುರುಮುಖದಿಂದ ರಹಸ್ಯತ್ರಯಾರ್ಥದ
ತಿರುಳನರಿತು ತೀವ್ರದೊಳು
ಪರಿಹರಿಪುದು ಮಂತ್ರಾಂತರ ದೇವತಾಂ
ತರ ಸಾಧನಂತರಂಗಳನು

೪೯

ಪಂಚಸಂಸ್ಕಾರಗಳನು ಪಡೆದೊಡನರ್ಥ
ಪಂಚಕತತ್ವಮನರಿತು
ಪಾಂಚಕಾಲಿಕ ಧರ್ಮವನೆಸಗುತ ನಿ
ಶ್ಚಂಚಲ ಚಿತ್ತದೊಳಿಹುದು

೫೦

ಇದು ಮಂತ್ರವಿದು ದೇವತೆಯಿದು ನಡೆತೆಯೆಂ
ಬುದನರಿತಂತರಂಗದೊಳು
ಮುದದೊಡನಿರ್ಪ ಮುಮುಕ್ಷುಗಳಿಗೆ ಮುಕ್ತಿ
ಪದವಿ ಕೈಬಸಮಾಗಿಹುದು

೫೧

ಪತಿಯೊಲವಕ್ಕೆ ಸತಿಯರೊಳು ಸತಿಯರು
ಪತಿಪಾದಭಕ್ತೆಯರಕ್ಕೆ
ಸತಿಯರ ಮೈಮೆ ಸಕಲ ಜಗದೊಳು ನಿಲ್ಕೆ
ಸತಿಧರ್ಮ ಶಾಶ್ವತಮಕ್ಕೆ

೫೨

ಉರ್ವೀಶರು ಧಾರ್ಮಿಕರಕ್ಕೆ ಜಗದೊಳು
ಪಾರ್ವರು ಪದುಳದೊಳಿರ್ಕೆ
ಒರ್ವರೊರ್ವರೊಳೊಡವೆರೆಗೆ ದಂಪತಿಗಳು
ಸರ್ವರು ಸೌಖ್ಯದೊಳಿರ್ಕೆ

೫೩

ಶ್ರೀವೇದಮಾರ್ಗ ಪ್ರತಿಷ್ಠಾಪನಾಚಾರ್ಯ
ನಾ ವೈಷ್ಣವಧರ್ಮಮೂರ್ತಿ
ಆವನುಭಯ ವೇದಾಂತಾಚಾರ್ಯನೆಂ
ಬೀ ವಿಧದೇಳ್ಗೆವೆತ್ತಿಹನು

೫೪

ಶ್ರೀ ಶುಕ ವೇದವ್ಯಾಸ ವಾಲ್ಮೀಕಿ ಪ
ರಾಶರರನು ಪಡಿಗೊಂಡು
ಶ್ರೀಶಪದಾಂಬುಜಭಕ್ತಿ ತತ್ವಜ್ಞಾನ
ರಾಶಿಯೆನಿಸಿ ರಾಜಿಪನು

೫೫

ಈ ಮಹಿಮೆಯೊಳೆಸೆವಳಸಿಂಗರಾರ್ಯನು
ದ್ದಾಮ ಕೃಪಾವೈಭವಕೆ
ಭೂಮಿಯೆನಿಸಿ ನೆಗಳಿದ ಮೈಮೆಯಿಂದಾ
ನೀ ಮಹಾಕೃತಿಯ ಪೇಳಿದೆನು

೫೬

ಧರ್ಮರಹಸ್ಯವನರಿತಿರ್ಪೆನೆಂಬೊಂದು
ಪೆರ್ಮೆಯೊಳುಸುರ್ದವಳಲ್ಲ
ಧರ್ಮದ ನೆನಹು ಮರೆಯದಂತೆ ಕೃತಿಯಾಗಿ
ನಿರ್ಮಿಸಿ ನೆಲೆಗೊಳಿಸಿದೆನು

೫೭

ಭಾವಿಸೆ ಬಿಜ್ಜೆಗಲಿತ ಪೆರ್ಮೆಯೆನಗಿಲ್ಲ
ದೇವತೆಗಳ ವರಮಿಲ್ಲ
ಆವುದನುಪದೇಶವಿತ್ತನಾರ್ಯನು ತನ
ಗಾ ವಿಧದೊಳು ಪೇಳಿದೆನು

೫೮

ಓಲೆವಿಡಿದು ನಾಮೋದಲೇಕಿದನೆಮ್ಮ
ಶೀಲವನೆಂದು ಕಳೆಯದೆ
ಬಾಲೆ ಬಣ್ಣಿಸಿ ಬಳಲಿದಳೆಂಬ ಮರುಕದಿಂ
ದಾಲಿಪುದಖಿಲ ಸತಿಯರು

೫೯

ಮಳೆಯಕ್ಕೆ ಕಾಲಕಾಲಕೆ ದೇವರೊಲವಿಂದ
ಬೆಳೆಗೈಗೆ ಪೆರ್ಚುಗೆಯಕ್ಕೆ
ಇಳೆಯೊಳು ಪತಿ ಪುತ್ರ ಪೌತ್ರ ಸಂಪದದೊಡ
ನೊಳುವೆಂಡಿರೊಪ್ಪದೊಳಿರ್ಕೆ

೬೦

ಶ್ರೀರಂಗ ಪಟ್ಟಣದೊಳು ಸಿರಿ ನೆಲಸಿರ್ಕೆ
ಭೂರಿವೈಭವ ಪುದಿದಿರ್ಕೆ
ಶ್ರೀರಂಗಧಾಮನ ದಿವ್ಯಯಾತ್ರೋತ್ಸವ
ದಾರಾಧನೆ ಮಿಗಿಲಕ್ಕೆ

೬೧

ಕನ್ನಡನಾಡೊಳು ಕಲಿಯುಗ ಪುಗದಿರ್ಕೆ
ಕನ್ನಡಿಗರು ಘನರಕ್ಕೆ
ಉನ್ನತಿವಡೆಗೆಯವರ ದೇಗುಲಗಳು
ಸನ್ನುತಿವಡೆಗೆ ಸತ್ರಗಳು

೬೨

ಈ ವಸುಧೆಯ ಧರ್ಮದೊಳು ಪಾಲಿಸುಗೆ ಚಿಕ
ದೇವರಾಜೇಂದ್ರಚಂದ್ರಮನು
ದೇವಗೋವಿಪ್ರಸಂತತಿ ಸಂತಸದೊಳಿರ್ಕೆ
ಗೋವಿಂದಗಾನಂದಮಕ್ಕೆ

೬೩

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಮನ್ನಣೆವಡೆದೊಪ್ಪಿತೊಂಬತ್ತನೆಯ ಸಂಧಿ
ಸನ್ನುತ ಗುಣಸಂಬಂಧಿ

೬೪

                                                         ಹದಿಬದೆಯ ಧರ್ಮ
                                                            ಸಂಪೂರ್ಣಂ