EN | KA

IX

Naḷacaritre

ಕದನದಲಿ ಪುಷ್ಕರನ ಬಲವನು
ಸದೆದು ಜೂಜಿಂ ಗೆಲಿದು ರಾಜ್ಯವ
ಮುದದಿ ಪಾಲಿಸುತಿರ್ದನಾ ಸತಿಸಹಿತ ನಳನೃಪತಿ

ಕೇಳು ಪಾಂಡುಕುಮಾರ ನಳಭೂ
ಪಾಲನಭ್ಯುದಯವನು ಮಂಗಳ
ದೇಳಿಗೆಯನೇನೆಂಬೆ ದಮಯಂತಿಯ ಮಹೋತ್ಸವವ
ಲೀಲೆಯಲಿ ಮಜ್ಜನವ ಮಾಡಿ ದು
ಕೂಲಮಣಿಭೂಷಣವ ಧರಿಸಿ ಚ
ಡಾಳಿಸುವ ಕಾಂತಿಯಲಿ ಸಿಂಹಾಸನದಿ ಕುಳ್ಳಿರ್ದ

ಈತನಾರು ಪಿತಾಮಹನೊ ಪುರು
ಹೂತನೋ ಮನ್ಮಥನೋ ಲಕ್ಷ್ಮೀ
ನಾಥನೊ ಚಂದ್ರಮನೊ ಶಂಕರನೋ ಮಹಾದೇವ
ಈತನೇ ನಳನೃಪತಿ ಭೂವಿ
ಖ್ಯಾತನೆಲ್ಲಿಂದಿಲ್ಲಿ ಬಂದನು
ಪೂತು ಮಝರೇ ಎನುತ ಕೊಂಡಾಡಿತು ನೃಪಸ್ತೋಮ

ಬಂದು ಕಂಡುದು ನಿಖಿಳಪುರಜನ
ವಂದು ಕಾಣಿಕೆಗೊಟ್ಟು ಮುದದಲಿ
ಸಂದಣಿಸೆ ಋತುಪರ್ಣ ಬಂದನು ಮಂತ್ರಿಜನಸಹಿತ
ಸಂದ ಮಣಿಕಾಂಚನ ಸುವಸ್ತುವ
ತಂದು ಸಮುಖದೊಳಿರಿಸಿ ವಿನಯದಿ
ನಿಂದು ಬಿನ್ನೈಸಿದನು ಕರಗಳ ಮುಗಿದು ನಳನೃಪಗೆ

ಸೋಮಕುಲ ನೃಪಸಾರ್ವಭೌಮ ಸ
ನಾಮ ಮಂಗಳನಿಳಯ ಜಿತಸಂ
ಗ್ರಾಮ ಧೀರ ವಿರೋಧಿಸಾಮಜಸಿಂಹ ದಯಾಶೀಲ
ತಾಮಸನು ಮತಿಗೇಡಿ ಮಾನವ
ಪಾಮರನ ಗುಣದೋಷವೆಣಿಸದೆ
ಪ್ರೇಮದಿಂದೊಲಿದೆನ್ನ ನೀ ಸಲಹೆಂದು ಕೈಮುಗಿದ

ರೂಢಿಯಲಿ ನಾ ನಿಮ್ಮನರಿಯದ
ಮೂಢಮತಿಯವಿವೇಕಿ ತುರಗವ
ಹೂಡಿದಾಗಲೆ ರಥಕೆ ಆದಿಯೊಳರಿದೆನೇ ತಾನು
ಮಾಡಿದಪರಾಧಗಳನೊಂದನು
ನೋಡಲಾಗದು ಚಿತ್ತದಲಿ ಖಯ
ಖೋಡಿಯಿಲ್ಲದೆ ಸಲಹಬೇಕೆಂದೆರಗಿದನು ಪದಕೆ

ಈ ಪರಿಯೊಳೆನಲಾ ನೃಪನ ಸಂ
ತಾಪವನು ಪರಿಹರಿಸಿ ನಳನೃಪ
ತಾ ಪಿರಿದು ಮಣಿಭೂಷಣಂಗಳನಿತ್ತು ನಸುನಗುತ
ಕೋಪವಿನಿಸಿಲ್ಲೆಂದಯೋಧ್ಯಾ
ಭೂಪನನು ಮನ್ನಿಸುವ ಸಮಯದಿ
ತಾಪಸರನೊಡಗೊಂಡು ಬಂದನು ಒಲಿದು ಮೈತ್ರೇಯ

ಬಂದ ಮುನಿಗವನೀಶ ಚರಣ
ದ್ವಂದ್ವದಲಿ ಚಾಚಿದನು ಮಕುಟವ
ನಂದು ಪಿಡಿದೆತ್ತಿದನು ನಸುನಗುತಲ್ಲಿ ಕುಳ್ಳಿರ್ದ
ಎಂದನೆಲೆ ನಳನೃಪತಿ ನಿನಗೆ ಮು
ಕುಂದನೊಲುಮೆಯು ಆವ ಕಾಲದಿ
ಸಂದಿರಲುಯಿನ್ನಾವುದರಿದಿಲ್ಲೆಂದನಾ ಮುನಿಪ

ಕಲಿಪುರುಷನಿಂದಾದುದುಪಹತಿ
ಲಲನೆ ಪುತ್ರರನಗಲಿ ಕಷ್ಟವ
ಬಳಸಿದೆಯಲಾ ನೊಂದು ಸತ್ಯವ ಬಿಡದೆ ಸಂಚರಿಸಿ
ಸುಲಭನಾದೆ ಕುಲಾಂಗನೆಯ ವ್ರತ
ಫಲದ ಪುಣ್ಯೋದಯದಿ ನಿಜಸಿರಿ
ಫಲಿಸಿತಿನ್ನೀ ಲೋಕದಲಿ ನಿನಗಾರು ಸರಿಯೆಂದ

ಹರಿಯ ನೆಲೆಗೆಡಿಸಿದನು ಪರಮೇ
ಶ್ವರನ ಭಿಕ್ಷವನೆತ್ತಿಸಿದ ಸರ
ಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿ
ಕರುಣಹೀನನು ನಿನ್ನ ಸೋಂಕಲು
ತೆರನ ಕಾಣದೆ ಹಲವು ದಿನ ಕಾ
ತರಿಸಿ ಛಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ

ಎಲ್ಲ ನೃಪರಂತಲ್ಲ ಲಕ್ಷ್ಮೀ
ವಲ್ಲಭನ ಪ್ರತಿಬಿಂಬ ನಿನ್ನಲಿ
ನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನು
ಸಲ್ಲಲಿತ ಸಾಮ್ರಾಜ್ಯಪದವಿಂ
ದೆಲ್ಲ ನಿನಗಹುದೆಂದು ಧರಣೀ
ವಲ್ಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ

೧೦

ಎಂದು ಹರಸಿದನವನಿಪಗೆ ಮುದ
ದಿಂದ ಮಂತ್ರಾಕ್ಷತೆಗಳಲಿ ಮುನಿ
ವೃಂದ ಸಂತೋಷಿಸಿತು ನೃಪ ಸಿಂಹಾಸನದೊಳಿರಲು
ಇಂದುವದನೆಯರಾರತಿಯ ನಲ
ವಿಂದಲೆತ್ತಿದರಲ್ಲಿ ಸತಿಯರು
ಸಂದಣಿಸಿ ಪಾಡಿದರು ಶೋಭಾನವನು ಮನವೊಲಿದು

೧೧

ಊದಿದುವು ಕಹಳೆಗಳು ಶಂಖವು
ನಾದಿಸಿತು ಭೇರೀ ಮೃದಂಗ ವಿ
ನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿ
ಮೇದಿನೀಶ್ವರರಾಗ ಮುಯ್ಗಳ
ನೋದಿಸಿದರವನಿಪಗೆ ಸತಿಗಿ
ನ್ನೈದೆತನ ಮಿಗಲೆಂದು ಹರಸಿತು ಮುನಿವಧೂನಿಕರ

೧೨

ಅರಸ ಕೇಳು ವಿದರ್ಭಪತಿ ಮುನಿ
ವರನುಪಚರಿಸಿದನು ಧರಣೀ
ಸುರರಿಗಿತ್ತನು ಗೋಹಿರಣ್ಯ ಸುವಸ್ತುದಾನವನು
ಕರೆಸಿ ಕೊಟ್ಟನು ನೃಪತಿಗಖಿಲಾ
ಭರಣಗಳ ಕರಿ ತುರಗ ರಥವನು
ಪುರಜನರ ಸಂತೈಸಿ ಕಳುಹಿದನಖಿಳಬಾಂಧವರ

೧೩

ಹರೆದುದೋಲಗವಲ್ಲಿ ಯಾಚಕ
ವರರು ಕೊಂಡಾಡಿದರು ಧರಣೀ
ಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮನಗರಿಗಳ
ಮರುದಿವಸ ಋತುಪರ್ಣ ನಳನೃಪ
ಗೆರಗಿ ಕಳುಹಿಸಿಕೊಂಡಯೋಧ್ಯಾ
ಪುರವ ಹೊಕ್ಕನು ಚೈದ್ಯಭೂಪತಿ ಮರಳಿದನು ಪುರಕೆ

೧೪

ಇಂದುಮುಖಿ ದಮಯಂತಿಯೊಡನಾ
ನಂದದಲಿ ನಳನೃಪತಿ ಮಾವನ
ಮಂದಿರದಿ ತಾನೊಂದು ವತ್ಸರವಿದ್ದವಿಭವದಲಿ
ಮುಂದೆ ನಮ್ಮಯ ನಿಷಧಪುರಿಗಾ
ವಿಂದು ಗಮಿಸಲು ಬೇಕೆನುತ ತಾ
ನಂದು ಭೀಮನೃಪಾಲನೊಡನಾಲೋಚಿಸಿದ ಹದನ

೧೫

ದಂಡು ನಡೆಯಲಿ ನಿಷಧಪುರಿಗಾ
ಭಂಡ ನೃಪ ಪುಷ್ಕರನ ಮಾತೇ
ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದೆನುತ
ಮಂಡಲಾಧಿಪನೆನಲು ಭೂಪರ
ತಂಡವೆದ್ದುದು ಕೂಡೆ ಭಟರು
ದ್ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ

೧೬

ತುರಗ ಹಲ್ಲಣಿಸಿದುದು ರಥ ಮೋ
ಹರಿಸಿ ತೆರಳಿತು ಸಂಗರಕೆ ಮದ
ಕರಿಗಳಿಟ್ಟಣಿಸಿದುದು ಕಾಲಾಳಿರದೆ ಸಂದಣಿಸೆ
ನೆನೆದುದಗಣಿತ ಸೈನ್ಯ ಸಾಗರ
ಮೊರೆವವೋಲ್ ಗಂಭೀರಭೇರಿಗ
ಳುರವಣಿಸೆ ಹೊರವಂಟ ನಳನೃಪನರಸ ಕೇಳೆಂದ

೧೭

ತುರಗಚಯ ವೆಂಟಣಿಸಿ ಹೂಡಿದ
ವರರಥಕೆ ಬಲವದು ಕೈದುವ
ಧರಿಸಿಯೇರಿದನರಸ ಮಂಗಳವಾದ್ಯರಭಸದಲಿ
ತೆರಳಿತಲ್ಲಿ ಮಹಾರಥರು ಸಂ
ಹರಕೆ ಮುಂಚುವ ಭಟರ ಗಡಣದಿ
ಧುರಕೆ ನಡೆದರು ಮುಂದೆ ಸಾರುತ ಗೌರುಗಹಳೆಯಲಿ

೧೮

ಇದು ಕಣಾ ನಳನಂದು ವನವಾ
ಸದ ಪಯಣವಾದಲ್ಲಿ ಮಕ್ಕಳ
ಪದುಳದಿಂದೇರಿಸಿ ವಿದರ್ಭಕೆ ಕಳುಹಿಬಿಟ್ಟ ರಥ
ಗದಗದಿಪ ನವರತ್ನನಿಚಯದೆದೊ
ಳುದಿಸಿ ಮೆರೆವ ಸುವರ್ಣಕಲಶವ
ಮದನ ನೆಲೆವೀಡೆನಿಸಿ ಮೆರೆದುದು ವರವರೂಥವದು

೧೯

ಹೊಳೆವ ಸಿಂಧದ ಸಾಲ ಝಲ್ಲರಿ
ಗಳ ಪತಾಕದ ಛತ್ರ ಚಮರಾ
ವಳಿಗಳಿಂದಲಿ ಧಾತುಗುಂದಿದುದಭ್ರತಳ ಮುಸುಕಿ
ಉಲಿದ ಮಂಗಳಪಾಠಕರ ಕಳ
ಕಳಿಕೆ ಮಿಗೆ ಹೆಬ್ಬಲ ಛಡಾಳಿಸೆ
ನೆಲ ಬಿರಿಯಲೈತಂದು ಬಿಟ್ಟುದು ನಿಷಧನಗರಿಯಲಿ

೨೦

ದಾಳಿಯಿಟ್ಟರು ಹರಿದು ದಿಕ್ಕಿನ
ಮೂಲೆಯವರಂಜಿದರು ಮುಮ್ಮೊನೆ
ಯಾಳು ಕವಿದುದು ಹಿಡಿದರಗ್ಗದ ಸೆರೆಯ ಸೂರೆಗಳ
ಕೇಳಿದನು ಪುಷ್ಕರನು ನಿಷಧನ
ದಾಳಿ ಬರುತಿದೆ ಖತಿಯ ಭರದಲಿ
ಕಾಳಗಕೆ ನಳನೃಪತಿ ಬಂದನೆನುತ ಮುಳಿದೆದ್ದ

೨೧

ಆಗಲಿದಕೇನೀಗ ರಾಜ್ಯವ
ನೀಗಿದಳಲಿನೊಳೊಮ್ಮೆ ಕದನಕೆ
ತಾಗಿದನು ತಪ್ಪೇನು ಬರಹೇಳೆಮ್ಮ ಸೈನಿಕರ
ಈಗಲೀತನ ಕಡಿದು ಸೆರೆಗಳ
ಬೇಗ ಹಿಡಿಯೆಂದೆನುತ ನಿಜಬಲ
ಸಾಗರವ ನೆರಹಿದನು ಕಳುಹಿದ ತನ್ನ ದಳಪತಿಯ

೨೨

ಹರಿಗೆ ಖಡ್ಗ ಕಠಾರಿ ತೋಮರ
ಪರಶು ಮುದ್ಗರ ಕುಂತ ಬಲ್ಲೆಹ
ಪರಿಘ ಚಕ್ರ ತ್ರಿಶೂಲ ಕಕ್ಕಡ ಭಿಂಡಿವಾಳಚಯ
ಸುರಗಿ ಸಬಳ ಮುಸುಂಡಿ ಮೊದಲಾ
ದುರುತರದ ಕೈದುಗಳ ಪಟುಭಟ
ರುರವಣಿಸಿ ತಾಗಿದರು ರಿಪುಮೋಹರವನನುಗೊಳಿಸಿ

೨೩

ಹೊಕ್ಕರಾಹವದೊಳಗೆ ಮೊನೆಯ
ಲ್ಲಿಕ್ಕಲಿಸಿ ಬರೆ ಕಂಡು ಮಝರೇ
ಚುಕ್ಕಿಗಳಿರಾ ಎನುತ ಹೊಯ್ದರು ಬೆರಸಿ ಪಟುಭಟರ
ಇಕ್ಕಿದರು ಸುರಗಿಯಲಿ ಕರಿಗಳ
ತಿಕ್ಕಿ ತಿವಿದರು ತೇರುಗಳ ಮುರಿ
ದಿಕ್ಕಿ ಪರಿಘದೊಳೊರಸಿದರು ಕಾಲಾಳ ಮೂದಲಿಸಿ

೨೪

ಇಟ್ಟಣಿಸಿ ಬರೆ ತೇಜಿಗಳ ನೆರೆ
ಕಟ್ಟಿ ಖಂಡಿಸಿ ಭಟರನಾ ಬೆ
ನ್ನಟ್ಟಿ ಕಡಿದರು ಬೆರಸಿ ಬಹ ಬಲು ವೀರನಾಯಕರ
ಹೊಟ್ಟುಗುಟ್ಟಿದರರುಣಜಲ ಸಾ
ಲಿಟ್ಟುದವನಿಯೊಳಮಮ ನೆರೆ ಜಗ
ಜಟ್ಟಿಗಳು ಕಾದಿದರು ರಣದಲಿ ಸುರರು ಬೆರಗಾಗೆ

೨೫

ಸಾರಥಿಯನೆಚ್ಚರಿಸಿ ರಥಿಕರು
ತೋರಿದರು ಕೈಗುಣವ ಸರಳಿನ
ಸಾರದಲಿ ರಿಪುಭಟರ ತಲೆಗಳ ತರಿದರಲ್ಲಲ್ಲಿ
ಕಾರಿದರು ರಕುತವನು ತೇರಿನ
ವಾರುವಂಗಳು ಮುಗ್ಗಿದುವು ರಣ
ಧೀರರೆಚ್ಚಾಡಿದರು ಗಾಯದೊಳೊರಲಿತುಭಯಬಲ

೨೬

ಕೆಡೆದ ತಲೆಗಳ ಸಿಡಿದ ಹುಬ್ಬಿನ
ಕಡಿದ ತೋಳ್ಗಳ ನೆಗ್ಗಿದೆಲುಗಳ
ಉಡಿದ ತೊಡೆಗಳ ಮಿದುಳ ಖಂಡದ ಹರಿದ ಕರುಳುಗಳ
ಒಡೆದ ನೆತ್ತಿಗಳಿಂದ ರಕುತದ
ಮಡು ಹರಿಯೆ ತರಹರಿಸಲಾರದೆ
ಪಡೆಮುರಿದು ಬರುತಿರಲು ಕಂಡನು ಖಾತಿಯೊಳು ನಳನು

೨೭

ಕರೆದು ಸಾರಥಿಗರುಹಿದನು ಪು
ಷ್ಕರನ ಬಲ ಕೈಮೀರಿ ಬರುತಿರೆ
ತಿರುಹು ತೇಜಿಯನಿತ್ತಲಿವದಿರನೊರಸಿ ಬೆನ್ನಿನಲಿ
ಕರುಳ ತೆಗೆವೆನೆನುತ ಚಾಪಕೆ
ತಿರುವನೇರಿಸಿ ಸರಳಿನಲಿ ಬೊ
ಬ್ಬಿರಿಯೆ ಧರೆ ತಲ್ಲಣಿಸಿತವನೀಪಾಲ ಕೇಳೆಂದ

೨೮

ಮುರಿದ ಬಲ ಸಂವರಿಸಿಕೊಂಡುದು
ಮೊರೆವ ಕಹಳಾರವದ ಸನ್ನೆಯೊ
ಳುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾರ
ಅರಸನಾ ಸಮಯದಲಿ ಹೂಡಿದ
ಸರಳ ಕೆನ್ನೆಗೆ ಸೇದಿ ಬಿಡೆ ಕ
ತ್ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ

೨೯

ಇಳೆ ಸರಳಮಯವಾಯ್ತು ಕೆಂಡದ
ಮಳೆ ಕರೆದುದೆನೆ ಪುಷ್ಕರನ ಬಲ
ದೊಳಗೆ ಬಿದ್ದುದನೇಕರಿಪುನೃಪಸೈನ್ಯ ಸಾಗರವು
ಮಲೆತವರ ಶಿರಗಳನು ಖಂಡಿಸಿ
ತಲೆಯ ಚೆಂಡಾಡಿದರು ರಥಿಕರು
ಬಲುಗುದುರೆ ಕಾಲಾಳು ನೆಗ್ಗಿತು ನಳನ ಶರಹತಿಗೆ

೩೦

ತೆರಹುಗೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಬಡಿವಂತೆ ರಿಪುಬಲ
ಮುರಿದು ನಿಂದುದು ಗಾಯವಡೆದರು ವೀರಪಟುಭಟರು
ಹುರಿಯೊಡೆದು ಮೈದೆಗೆದು ಸಲೆ ಕೈ
ಮುರಿಯೆ ಕೈದುವ ಬಿಸುಟು ಪಡೆ ಮೊಗ
ದಿರುಹಲೆಚ್ಚನು ಕೊಚ್ಚಿದನು ಪುಷ್ಕರಚತುರ್ಬಲವ

೩೧

ಗಾಳಿ ಮುರಿದೌಕಿದಡೆ ಘನಮೇ
ಘಾಳಿ ನಿಲುವುದೆ ನಿಷಧಪತಿ ಶರ
ಜಾಲದಲಿ ಕಡಿವಡೆದು ಬಿದ್ದರು ರಾಯರಾವುತರು
ಆಳು ಮುರಿದುದು ಕಂಡ ಮುಖದಲಿ
ಹೇಳಲೇನಾನವರ ವಿಧಿಯನು
ಸೋಲದಲಿ ಮನಗುಂದಿ ಹಾಯ್ದರು ಬಿಟ್ಟ ಮಂಡೆಯಲಿ

೩೨

ಆರು ಸಾಸಿರ ತೇರುಗಳು ಹದಿ
ನಾರುಸಾಸಿರ ಕರಿಗಳಿಪ್ಪ
ತ್ತಾರುಸಾವಿರ ತುರಗ ಕಾಲಾಳೊಂದು ಲಕ್ಷದಲಿ
ಸೇರಿತಂತಕಪುರಿಗೆ ಸರಳಿನ
ಸಾರದಲಿ ರಿಪುಸೇನೆ ಮುರಿದುದು
ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ

೩೩

ಮರನ ಹುತ್ತವನೇರಿದರು ಸಂ
ಗರದಿ ಕೈದುವ ಬಿಸುಟು ಸಲೆ ಮೈ
ಮರೆದು ತೇಜಿಯನಿಳಿದು ರಾವ್ತರು ಕೊರಳ ಸಲಹೆನುತ
ಕರವ ಮುಗಿದರು ಜೋದರರು ಕೈ
ಮರೆದು ಕದನದ ಗಾಯದಲಿ ನೊಂ
ದೊರಲಿ ಬಾಯಲಿ ಬೆರಳನಿಟ್ಟುದ್ದ ವೈರಿ ಪಾಯದಳ

೩೪

ಮುರಿದು ಬರುತಿದೆ ಜೀಯ ಬಲ ನಿಲ
ಲರಿದು ನಮ್ಮದು ನಳನೃಪಾಲನ
ಸರಹತಿಗೆ ನೆರೆ ಮುಗ್ಗಿ ಕೆಡೆದುದು ತಾರುತಟ್ಟಿನಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನಲು ಪುಷ್ಕರ
ಭರದಿ ಕೋಪದೊಳಂದು ಕರೆಸಿದನಾಗ ನಿಜಬಲವ

೩೫

ಅರಸ ಕೇಳರಮನೆಗೆ ಬಂದನು
ಉರುತರದ ಕೈದುಗಳ ತರಿಸಿಯೆ
ಧುರವಿಜಯರಿಗೆ ಕರೆಸಿಕೊಟ್ಟನು ಚಾಪಮಾರ್ಗಣವ
ಕರಿತುರಗ ಕಾಲಾಳು ನೆರೆದುದು
ಮೊರೆವ ವಾದ್ಯದ ರಭಸದಲಿ ಸಂ
ಗರಕೆ ಪಯಣವ ಮಾಡುತಿರ್ದನು ನೃಪತಿ ಕೇಳೆಂದ

೩೬

ತೆಗೆದು ಹಿಂದಕೆ ನಿಷಧಪತಿ ಕಾ
ಳಗದಿ ಹಿಡಿಸಿದ ಧರ್ಮಗಹಳೆಯ
ವಿಗಡಪುಷ್ಕರನಿತ್ತ ಕೋಪಾಗ್ನಿಯಲಿ ಖತಿಮಸಗಿ
ಹಗೆಗೆ ಜಯವಾಯ್ತಿದಿನಲಿ ತಾ
ಹೊಗುವೆನಹಿತರ ಮುರಿವೆನೆನೆ ಕೈ
ಮುಗಿದು ಬಿನ್ನೈಸಿದನು ವರಮಂತ್ರೀಶ ಪುಷ್ಕರಗೆ

೩೭

ಅರಿಭಯಂಕರ ನೈಷಧನ ಸಂ
ಗರದಿ ಗೆಲುವವರಾರು ದೇವಾ
ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು
ಮರುಳುತನ ಬೇಡಿನ್ನು ನೃಪನನು
ಕರೆಸಿ ಸಂಧಿಯ ಮಾಡಿ ಜೂಜಿನ
ಮರುವಲಗೆಯಲಿ ಗೆಲುವುದುಚಿತವಿದೆಂದನಾ ಮಂತ್ರಿ

೩೮

ವೀರಸೇನನ ತನಯ ನಿಷಧನ
ಸೇರಿಹಳು ಜಯಲಕ್ಷ್ಮಿ ಸೇನಾ
ಭಾರದಲಿ ಋತುಪರ್ಣ ಚೈದ್ಯ ವಿದರ್ಭ ಮೊದಲಾದ
ಭೂರಿನೃಪರೋಲೈಸುತಿದೆ ಸರಿ
ಯಾರು ಸಂಗ್ರಾಮದಲಿ ನಳನಲಿ
ಮೀರಿ ಕೈಮಾಡಿದರೆ ತಪ್ಪದು ಮರಣ ನಿನಗೆಂದ

೩೯

ಎನಲು ಕೇಳ್ದಾ ಮಾತಿನಲಿ ಬಂ
ದನು ನಳನ ಕಂಡನು ಮಹೀಪತಿ
ಯೆನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿ
ಜನಪತಿಗಳೀಕ್ಷಿಸಲಿ ಮರುಜೂ
ಜಿನಲಿ ನಿಪುಣರು ನಾವು ನಿಮ್ಮಲಿ
ಮನಕೆ ಹರುಷಿತವಾಗಲಾಡುವೆನೆಂದ ನಸುನಗುತ

೪೦

ಎಲವೊ ಕೇಳಿನ್ನಾದುದಾಗಲಿ
ಕಲಹಕಂಜುವೆ ನೀನು ಜೂಜಿನ
ಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನು
ಕಲಹವಾಗಲಿ ಜೂಜದಾಗಲಿ
ಗೆಲುವೆ ನಿನ್ನನು ಕುಟಿಲಹೃದಯದ
ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ

೪೧

ಅರಸ ಕೇಳಾ ಪುಷ್ಕರನು ತ
ನ್ನರಮನೆಗೆ ಕರೆತಂದನಾ ಕಲಿ
ಪುರುಷನಿಂದಲಿ ಮುನ್ನ ಗೆಲಿದಗ್ಗಳಿಕೆಯಲಿ ನೃಪನ
ಪಿರಿದು ತಾ ಗೆಲಬಲ್ಲೆನೆಂದಾ
ಪ್ತರನು ಕರೆಸಿದನೋಲಗದಿ ಕು
ಳ್ಳಿರಲು ತಂದರು ಸಾರಿಗಳನಿರಿಸಿದರು ಸಮ್ಮುಖದಿ

೪೨

ನಳನೃಪತಿ ನೀ ಗೆಲಿದೊಡೀ ಭೂ
ಲಲನೆಯನು ತಾ ಬಿಡುವೆ ಸೋತರೆ
ಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲು
ಇಳೆಯೊಳಿಹ ಭೂರುಹದ ಹೃದಯದ
ನೆಲೆಯ ಬಲ್ಲಗ್ಗಳಿಕೆಯಲಿ ತಾ
ಗೆಲುವೆನೆಂದೊಪ್ಪಿದನು ಮನದಲಿ ಧೈರ್ಯಪರನಾಗಿ

೪೩

ಹೂಡಿದರು ಸಾರಿಗಳ ನೆತ್ತವ
ನಾಡಿದರು ಮನ ನಲಿದು ಖಾಡಾ
ಖಾಡಿಯಲಿ ದುಗ ಬಾರ ಇತ್ತಿಗವೆಂಬವ ರಭಸದಲಿ
ಬೇಡಿದರೆ ಬೀಳುವುದು ದಾಯದ
ರೂಢಿ ಜಳುಪಿಸ ಹೊಳೆವ ದಾಳದ
ರೂಢಿಗಚ್ಚರಿಯಾಗೆ ನಳನೃಪ ಗೆಲಿದು ಬೊಬ್ಬಿರಿದ

೪೪

ಖಿನ್ನನಾದನು ಪುಷ್ಕರನು ಹರು
ಷೋನ್ನತಿಯ ಬೀಳ್ಕೊಡಲು ಗುಣಸಂ
ಪನ್ನನೇರಿದ ರತ್ನಸಿಂಹಾನವ ನಳನೃಪತಿ
ಪನ್ನಗಾರಿಧ್ವಜನ ಕೃಪೆ ನಿನ
ಗಿನ್ನು ಸಿದ್ಧಿಸಲೆಂದು ಮುನಿಜನ
ರುನ್ನತದಿ ಕೊಂಡಾಡಿ ಹರಸಿದರೆಲ್ಲ ಧರಣಿಪನ

೪೫

ದೇವದುಂದುಭಿ ಮೊಳಗಿದುದು ದಿವಿ
ಜಾವಳಿಗಳಭ್ರದಲಿ ಸಂಧಿಸಿ
ಹೂವಿನಲಿ ಮಳೆಗರೆದರಾಗ ನೃಪಾಲನಂಗದಲಿ
ಕೋವಿದರು ಸುಜನಾವನೀಶರು
ಸೇವಿಸಲು ಧರೆ ನಲಿಯೆ ನೃಪ ರಾ
ಜೀವಲೋಚನನಂತೆ ಸಿಂಹಾಸನದಿ ರಂಜಿಸಿದ

೪೬

ಬಂದು ಕಂಡರು ಪುರಜನರು ನಲ
ವಿಂದ ಕಾಣಿಕೆಗೊಟ್ಟು ಸುರಕುಲ
ವೃಂದ ನಲಿಯಲು ಮಂತ್ರಿಬಾಂಧವರೆಲ್ಲ ಕೈಮುಗಿದು
ವಂದಿಸುತ ಕುಳ್ಳಿರಲು ಸಭೆಯಲಿ
ತಂದರಾರತಿಗಳನು ನೃಪಗರ
ವಿಂದಮುಖಿಯರು ಹರುಷದಿಂದೆತ್ತಿದರು ಮನವೊಲಿದು

೪೭

ನಲವು ಹಿಂಗಿದ ಪುಷ್ಕರನ ಮನ
ವೊಲಿದು ಮನ್ನಿಸಿ ಕರೆದು ನಳನೃಪ
ಕಲಿಪುರುಷನಿಂದಾದುದುಪಹತಿ ನಿನ್ನ ತಪ್ಪೇನು
ಹಲವ ಹಂಬಲಿಸದಿರು ನಿನ್ನಲಿ
ಚಲವು ನಮಗಿನಿತಿಲ್ಲ ಮುನ್ನವೊ
ಲಿಳೆಯ ಪಾಲಿಸು ನಮ್ಮ ನೀನೋಲಗಿಸು ಹೋಗೆಂದ

೪೮

ಎನಲು ಲಜ್ಜಿತನಾಗಿ ಪುಷ್ಕರ
ವಿನಯದಲಿ ತಾನೆರಗಿ ನಿಮ್ಮಡಿ
ವನಜದೆಡೆಗಪರಾಧಿಯಾದೆನಗಾವ ಗತಿಯಹುದೊ
ಜನಪ ಸಲಹು ಕೃತಘ್ನನನು ಸ
ಜ್ಜನಶಿರೋಮಣಿ ನೀನು ಗುಣಹೀ
ನನನು ಕೃಪೆಯಲಿ ರಕ್ಷಿಸೆಂದೆರಗಿದನು ಪದಯುಗಕೆ

೪೯

ತನುವ ಸೈಗೆಡೆದಿಹನನೆಬ್ಬಿಸಿ
ಜನಪನೆಂದನು ಪೂರ್ವಫಲ ಸಂ
ಜನಿಸಿತಿದಕಿನ್ನಾರು ಮಾಡುವುದೇನುಯೆನುತವನ
ವಿನಯವಚನಕೆ ಮೆಚ್ಚಿ ಕೊಟ್ಟನು
ಕನಕಮಣಿಭೂಷಣಗಳನು ಕಾಂ
ಚನವರೂಥವನಿತ್ತು ಮನ್ನಿಸಿ ಕಳುಹಿದನು ಮನೆಗೆ

೫೦

ಕರೆಸಿದನು ಬಾಂಧವರ ಮಂತ್ರೀ
ಶ್ವರರ ವಿದ್ವಾಂಸರ ನೃಪಾಲರ
ಕರಣಿಕರನಾಪ್ತರನು ಹಿರಿಯರ ವೀರಪಟುಭಟರ
ವರಸಚಿವ ಸಾಮಂತ ಮಲ್ಲರ
ತರುಣಿಯರ ನಟ ಗಾಯಕರ ಸುಜ
ನರಿಗೆ ಮನ್ನಿಸಿ ಕೊಟ್ಟನುಡುಗೊರೆಗಳ ಮಹೀಪಾಲ

೫೧

ಕನಕರತ್ನಪ್ರಭೆಯ ಸಿಂಹಾ
ಸನದೊಳೊಪ್ಪಿದನುಭಯಪಾರ್ಶ್ವದಿ
ವನಿತೆಯರು ಚಿಮ್ಮಿದರು ಸಿತಚಾಮರಪವನಾ ನೃಪಗೆ
ಜನಪತಿಗಳಿಕ್ಕೆಲದಲಿ ಮಂತ್ರಿ
ಜನ ಪುರೋಹಿತ ಮಲ್ಲ ಗಾಯಕ
ವನಿತೆಯರ ಗಡಣದಲಿ ಮೆರೆದುದು ನೃಪತಿಯಾಸ್ಥಾನ

೫೨

ಚಿಂತೆ ಬಲಿದು ವಿದರ್ಭದಲಿ ದಮ
ಯಂತಿ ಕೆಳದಿಯರೊಡನೆ ನುಡಿದಳು
ಪಂತದಲಿ ಪುಷ್ಕರನ ಗೆಲಿದನೋ ಸೋತನೋ ನೃಪತಿ
ಕಂತುಪಿತನ ಕೃಪಾವಲೋಕನ
ವೆಂತಿಹುದೊ ತನಗೆಂಬ ಸಮಯದೊ
ಳಂತರಿಸದೈತಂದರಲ್ಲಿಗೆ ನಳನ ಮಂತ್ರಿಗಳು

೫೩

ತಾಯೆ ಬಿನ್ನಹವಿಂದು ನಮ್ಮನು
ರಾಯನಟ್ಟಿದ ನಿಮ್ಮ ಬಳಿಗೆ ನಿ
ರಾಯಸದಿ ಪುಷ್ಕರನ ಗೆಲಿದನು ಸಕಲರಾಜ್ಯವನು
ನ್ಯಾಯದಲಿ ಕೈಕೊಂಡು ನಿಮ್ಮನು
ಪ್ರೀಯದಿಂ ಬರಹೇಳಿದನು ಕಮ
ಲಾಯತಾಂಬಕಿ ಬಿಜಯಮಾಡೆಂದೆರಗಿದರು ಪದಕೆ

೫೪

ಕೇಳಿ ಹರುಷಿತೆಯಾದಳವರಿಗೆ
ಪಾಲಿಸಿದಳಾಭರಣವಸ್ತುವ
ಲೋಲಲೋಚನೆ ಬಂದು ತಂದೆಗೆ ನಮಿಸಿ ವಿನಯದಲಿ
ನಾಳೆ ಪಯಣವ ಮಾಡೆ ನಿಷಧನೃ
ಪಾಲನಲ್ಲಿಗೆ ತನ್ನ ಕಳುಹೆನೆ
ಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭೀಮನೃಪ

೫೫

ತೆಗೆಸಿದನು ಭಂಡಾರದಲಿ ಬಗೆ
ಬಗೆಯ ವಸ್ತುವ ಸುಭಟರಿಗೆ ಝಗ
ಝಗಿಪ ಹೊನ್ನಾಯುಧವ ನವರತ್ನಗಳ ತೊಡಿಗೆಗಳ
ಸುಗುಣೆಯರು ಮೊದಲಾದ ಪರಿವಾ
ರಗಳಿಗಿತ್ತನು ಪಯಣದಲಿ ತೇ
ರುಗಳ ಶೃಂಗರಿಸಿದರು ಬಿರುದಿನ ಸಿಂಧುಗಳ ನೆಗಹಿ

೫೬

ಬಿಗುಹನೇರಿಸಿ ಹಯಗಳನು ರೆಂ
ಚೆಗಳ ಹಮ್ಮಿದರಾನೆಯಲಿ ಸ
ತ್ತಿಗೆಗಳನು ಪಲ್ಲೈಸಿದರು ಮೇಲೆಸೆವ ಕಳಶದಲಿ
ಸೊಗಸುದೋರುವ ಭಟರ ನೆರೆ ಕೈ
ದುಗಳ ಹೊರಹಿನ ನೃಪರ ಬಳಿಯಲಿ
ನೆಗಹಿ ಬೀಸುವ ಚೌರಿಗಳ ಸಂಭ್ರಮದೊಳೊದಗಿದರು

೫೭

ಮಣಿರಥಂಗಳ ನಡುವೆ ಸುಳಿವಂ
ದಣದ ಸಾಲಿನ ಮಧ್ಯದಲಿಯುರ
ವಣಿಪ ಮತ್ತಗಜಂಗಳಲಿ ಮಾವುತರ ಕಳಕಳದ
ಕುಣಿವ ತೇಜಿಯ ರಾವುತರ ಸಂ
ದಣಿಗಳಲಿ ಚತುರಂಗಬಲವಿ
ಟ್ಟಣಿಸಿ ನಡೆದುದು ಸಾಲುಸತ್ತಿಗೆಗಳ ವಿಡಾಯಿಯಲಿ

೫೮

ನಾರಿಯರ ಸಂದಣಿಯು ನೆರೆದುದು
ತೇರಿನಲಿ ಕೆಲರಂದಣದಿ ಕೆಲ
ರೇರಿದರು ವಾಜಿಗಳ ಗಜಕಂಧರದ ಗದ್ದುಗೆಯ
ಸೇರಿ ನಡೆದರು ಮುಂದೆ ಘನಗಂ
ಭೀರವಾದ್ಯದ ರಭಸ ತಾನದು
ಭೋರಿಡಲು ಹೊರವಂಟಳಂಗನೆ ಸಕಲ ವಿಭವದಲಿ

೫೯

ಬಂದಳಾ ದಮಯಂತಿ ದೇವ ಮು
ಕುಂದ ರಕ್ಷಿಸುಯೆನುತ ತನ್ನಯ
ನಂದನರ ಸಹಿತೇರಿದಳು ಮಣಿಮಯವರೂಥವನು
ಹಿಂದೆ ಮುಂದಿಕ್ಕೆಲದ ನಾರೀ
ವೃಂದ ನಡೆಯಲು ಮನದ ಹರ್ಷಾ
ನಂದದಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ

೬೦

ನೋಡುತಿರ್ದರು ಪುರಜನರು ನೆಲೆ
ಮಾಡದುಪ್ಪರಿಗೆಯಲಿ ಮಿಗೆ ಕರು
ಮಾಡದೆಡೆಯಲಿ ಸೌಧಗಳ ಜಾಲಂಧ್ರಶಿಖರದಲಿ
ನೋಡುವರ ತಾ ನೋಡಿ ನಸುನಗು
ತಾಡುವರ ನೃತ್ಯದಲಿ ಗಾನವ
ಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ

೬೧

ಬಾಗಿಲಲಿ ರಥವಿಳಿದು ಬಳಿಕ ಸ
ರಾಗದಿಂದೊಳಹೊಗುತಿರಲು ಪು
ಣ್ಯಾಂಗನೆಯರಾರತಿಯನೆತ್ತಿದರತುಳವಿಭವದಲಿ
ಭೋಗಿಶಯನನ ಕರುಣ ನಿಮಗುಂ
ಟಾಗಿ ಸುಖಿಯಾಗೆಂದು ಹರಸಿದ
ರಾಗ ಮುನಿನಿಕುರುಂಬವಕ್ಷತೆ ತಳಿದರಂಗನೆಗೆ

೬೨

ಹರಕೆಗಳ ಕೈಕೊಳುತ ಸತಿ ಬಂ
ದರಮನೆಯ ಹೊಕ್ಕಳು ನೃಪಾಲನ
ಚರಣಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನು
ಅರಸ ಕೇಳೈ ನಿಷಧಪತಿ ನಿಜ
ತರುಣಿ ಸುತರೊಡಗೂಡಿ ಮಂಗಳ
ಕರದೊಳೊಪ್ಪಿದ ಸಕಲದೇವಾಮರರು ಕೊಂಡಾಡೆ

೬೩

ಪರಮಪುಣ್ಯೋದಯನು ಸದ್ಗುಣ
ಭರಿತ ಸತ್ಯಸುಭಾಷಿತನು ಸಂ
ಗರಸುಧೈರ್ಯನು ನಿತ್ಯನಿರ್ಮಲ ನಿಗಮಕೋವಿದನು
ಅರಸುಕುಲಪಾವನನು ನಳಭೂ
ವರನು ಸಿಂಹಾಸನದಿ ರಂಜಿಸಿ
ಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ

೬೪

ಮುನಿಕುಲಾಂಬುಧಿಚಂದ್ರ ರೋಮಶ
ಮುನಿಪ ವಿಸ್ತರಿಸಿದನು ನಳಭೂ
ಪನ ಚರಿತ್ರೆಯ ಕೇಳಿ ತಲೆದೂಗಿದನು ಯಮಸೂನು
ಮನಕೆ ಹರುಷಾನದವಾಯ್ತೆಲೆ
ಮುನಿಪ ನಿಮ್ಮಡಿ ಕರುಣದಲಿಯಿಂ
ದೆನಗೆ ಫಲಿಸಿತು ಪುಣ್ಯವೆಂದೆರಗಿದನು ಚರಣದಲಿ

೬೫

ದೇವಮುನಿಗಳು ನೀವು ನಮ್ಮನು
ಪಾವನವ ಮಾಡಿದಿರಿ ನಮಗಿ
ನ್ನಾವುದರಿದುಂಟಿನ್ನು ಪಾರ್ಥನ ಹದನವೇನರಿಯೆ
ಆ ವಿವರವೆನಗಿನ್ನು ತಿಳುಹೆನೆ
ದೇವನಗರಿಯೊಳಿಂದ್ರನಲಿ ಗಾಂ
ಡೀವಿ ಸುಸ್ಥಿರನರಸ ಚಿಂತಿಸಬೇಡ ನೀನೆಂದ

೬೬

ಎಲೆ ಯುಧಿಷ್ಠಿರ ಕೇಳು ಲೋಕದ
ಲಲನೆಯರ ಪರಿಯಲ್ಲ ನಾಲ್ವರು
ಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿ
ನಳಿನಮುಖಿ ದಮಯಂತಿ ಸೀತಾ
ಲಲನೆ ದ್ರೌಪದಿ ಚಂದ್ರಮತಿ ಕೋ
ಮಲೆಯರಚ್ಯುತನಚ್ಚುಮೆಚ್ಚಿನ ರಾಜವನಿತೆಯರು

೬೭

ನಿನಗೆ ಪಟ್ಟದ ಮಹಿಳೆ ದ್ರೌಪದಿ
ವನಿತೆಯರ ಸಾಮ್ರಾಜ್ಯಸಂಪದ
ವಿನಿತು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪುವು
ಜನಪ ಚಿಂತಿಸಬೇಡ ನಾಳಿನ
ದಿನದಿ ಬಹ ನಿನ್ನನುಜನರ್ಜುನ
ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ

೬೮

ಹರನು ನಿಮಗೆ ಸಹಾಯ ದೇವಾ
ಸುರರು ನಿಮಗೊಳ್ಳಿದರು ಲಕ್ಷ್ಮೀ
ವರನು ನಿಮಗಿನ್ನಂತರಂಗದ ಪರಮಸಖನಿರಲು
ಮರುಗಲೇಕಿನ್ನಾವುದರಿದೆಲೆ
ಧರಣಿಪತಿ ಸಾಕಿನ್ನು ರಾಜ್ಯದ
ಸಿರಿ ನಿನಗೆ ಬಂದಪುದು ರಿಪು ಸಂಹಾರವಹುದೆಂದ

೬೯

ಎಂದು ಬುದ್ಧಿಯ ಪೇಳಿ ಮುನಿ ಯಮ
ನಂದನನ ಬೀಳ್ಕೊಂಡು ತಾಪಸ
ವೃಂದಸಹಿತಲ್ಲಿಂದ ಹೊರವಂಟನು ನಿಜಾಶ್ರಮಕೆ
ಅಂದು ಯಮಳರು ಧೌಮ್ಯ ದ್ರೌಪದಿ
ಸದ ಮುನಿಜನಸಹಿತ ಯಮಸುತ
ಬಂದು ಹೊಕ್ಕನು ಪರ್ಣಶಾಲೆಯನಧಿಕ ಹರುಷದಲಿ

೭೦

ಈ ಕಥೆಯನಾಲಿಸುವ ಜನರಿಗ
ನೇಕ ಸುಖಸಾಮ್ರಾಜ್ಯ ಪದವಿಯ
ನಾ ಕಮಲಲೋಚನನು ವರಪುರದರಸ ಪಾಲಿಸುವ
ಲೋಕಪಾವನ ನಳನ ಕಥೆಯ ನಿ
ರಾಕರಿಸಿದವರಧಿಕನರಕದ
ಲೋಕವಾಳುವರೆಂದು ರೋಮಶ ನುಡಿದನರಸಂಗೆ

೭೧

ಮೇದಿನಿಯೊಳೀ ಪುಣ್ಯಚರಿತೆಯ
ನಾದರಿಸಿ ಬರೆದೋದಿ ಕೇಳುವ
ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ
ವೇದಗೋಚರ ಕೃಷ್ಣವರಪುರ
ದಾದಿಕೇಶವನಮರವಂದಿತ
ನಾದಿನಾರಾಯಣನು ಸಲಹುವನಖಿಳಸಜ್ಜನರ

೭೨