EN | KA

V

Naḷacaritre

ಅಡವಿಯಲಿ ಪತಿ ಕಳೆದು ಬಿಡೆ ಫಣಿ
ಯೊಡಲಿಗಿಳಿಯದೆ ಮುಂದೆ ಕರಿಗಳ
ಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು

ಕೇಳು ಕುಂತೀತನಯ ನಳನೃಪ
ಬೀಳುಕೊಟ್ಟನು ಪುರವನಲ್ಲಿಂ
ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ
ಹೇಳಲೇನದನವರ ವಿಧಿಯನು
ತಾಳಿಗೆಗಳೊಣಗಿದವು ಸತಿಯಳ
ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು

ಎಳೆಯ ಬಾಳೆಯ ಸುಳಿಯು ಅನಲನ
ಜಳದ ಹೊಯ್ಲಲಿ ನೊಂದವೊಲ್ ಕಡು
ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ
ಲಲಿತಹೇಮದ ತೂಗುಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ

ಮರುಗಲಿನ್ನೇಕರಸ ಬಿಡು ವಿಧಿ
ಬರೆದ ಬರೆಹವ ತಪ್ಪಿಸಲು ಹರಿ
ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು?
ಹರೆವುದಾಕ್ಷಣ ತುಂಬುವುದು ಗೋ
ಚರಿಸುವುದು ಸಿರಿ ನಿತ್ಯವೇನಿದ
ನರಿಯದವನೇ ನೋಯಲೇಕೆಂದಳು ಸರೋಜಮುಖಿ

ನುಡಿಯ ಕೇಳುತ ಮನದಿ ಮಿಡುಕುತ
ಪೊಡವಿಪನು ಸತಿಸಹಿತ ಘನಘೋ
ರಡವಿಯಲಿ ಬರುತಿರೆ ಜಗನ್ಮೋಹನದ ಪಕ್ಷಿಗಳು
ಪೊಡವಿಗಿಳಿಯಲು ಕಂಡಪೇಕ್ಷಿಸಿ
ಪಿಡಿವೆನಂದುರವಣಿಸಿ ನೃಪ ಹ
ಚ್ಚಡವ ಬೀಸಿದಡದನು ಕೊಂಡೊಯ್ದುವು ನಭಸ್ಥಳಕೆ

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ನಸುನಗುತ ನಿಂದಿರ
ಲಾಗ ಸೂಚಿಸಿದವು ನಿರಂತರ ರಾಜ್ಯಭೋಗವನು
ಬೇಗದಿಂದಪಹರಿಸಿಕೊಂಡವ
ರೀಗವಾವಿದನರಿದಿರೆಂದು ಸ
ರಾಗದಿಂದಲಿ ಮಾಯವಾದುವು ಪಕ್ಷಿಯುಗಳಗಳು

ಧರಣಿಪತಿ ಕೇಳ್ ನಿಷಧಪತಿ ಕಲಿ
ಪುರುಷ ಮಾಯವ ಬಲ್ಲನೇ ಮನ
ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು
ಹರಹರಾಯೆನುತಾಗ ಸೀರೆಯ
ಸೆರಗ ಹರಿದಿತ್ತಳು ನೃಪಾಲಗೆ
ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ

ಧರೆಯ ನೃಪರಿಗೆ ನಿಷಧಪುರಪತಿ
ಯರಮನೆಯ ಬಾಗಿಲಿನ ಸುಮುಖವು
ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ
ಹರೆದುದೆಲ್ಲ ಸಮಸ್ತರಾಜ್ಯದ
ಸಿರಿಗೆ ಬಾಹಿರನಾಗಿ ಸತಿಯಳ
ಸೆರಗನುಡುವಂತಾಯ್ತೆ ಹರಹರಯೆನುತ ಬಿಸುಸುಯ್ದ

ಧರೆಯ ಸಂಪದದಷ್ಟ ಭೋಗವ
ಪರಿಹರಿಸಿ ನಿಜಪುತ್ರಮಿತ್ರರ
ತೊರೆದು ನಂಬಿದ ಸತಿಯ ಘೋರಾರಣ್ಯಮಧ್ಯದಲಿ
ಹಿರಿದು ಬಳಲಿಸಿ ನೋಯಿಸಿದ ಕೇಳ್‍
ತರುಣಿಯೆನ್ನವೊಲಾರು ಪಾಪಿಗ
ಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದಾ

ಇನಿಯನಾಡಿದ ನುಡಿಗೆಯಂಗನೆ
ಕನಲಿ ನುಡಿದಳು ಶೋಕದಲಿ ನೀ
ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ
ಅನುದಿನವು ನಾ ನಿಮ್ಮ ಪದಯುಗ
ವನಜವನು ಭಜಿಸುವುದ ತೊರೆದೀ
ತನುವ ಸೈರಿಸಲಾಪೆನೇ ಹೇಳೆಂದಳಿಂದುಮುಖಿ

ನೆಳಲು ತನುವಿನ ಬಳಿಯೊಳಲ್ಲದೆ
ಚಲಿಸುವುದೆ ತಾ ಬೇರೆ ನಿಮ್ಮಡಿ
ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ
ಹಳುವವೇ ಸಾಮ್ರಾಜ್ಯ ನಿಮ್ಮಡಿ
ನೆಳಲಿನಲಿ ತಾನಿರುವೆನಲ್ಲದೆ
ನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ

೧೦

ಎನುತ ಸುರಿದಳು ಕಣ್ಣಿನಲಿ ಕಂ
ಬನಿಯ ಮಿಡಿದಳು ಬೆರಳಿನಲಿ ಮು
ನ್ನಿನಲಿ ಮಾಡಿದ ಕರ್ಮಫಲವಿದಕೇನ ಮಾಡುವುದು
ಎನಗೆ ಚಿಂತಿಸಲೇಕೆ ನೀನಿಂ
ದಿನಲಿ ನಿರ್ಮಲಚಿತ್ತದಲಿ ಕಾ
ನನವ ಸಂಚರಿಸುವೆನು ನಿಮ್ಮೊಡನೆಂದಳಿಂದುಮುಖಿ

೧೧

ಶೋಕವೇಕೆಲೆ ತರುಣಿ ಬಾರೆಂ
ದಾ ಕಮಲಲೋಚನೆಯ ತೋಳಿನೊ
ಳೌಕಿ ಬಿಗಿಯಪ್ಪಿದನು ಸೆರಗಿನೊಳೊರಸಿ ಕಂಬನಿಯ
ಜೋಕೆಯಲಿ ಕುಳ್ಳಿರಿಸಿ ತೊಡೆಯೊಳ
ನೇಕ ಪ್ರೀತಿಯೊಳೆಂದ ನೀನವಿ
ವೇಕಿಯೇ ಬಿಡು ಮನದ ದುಗುಡವನೆಂದನಾ ನೃಪತಿ

೧೨

ಎಂದು ಸತಿಯಳ ಸಂತವಿಟ್ಟರ
ವಿಂದನಾಭಧ್ಯಾನದಲಿ ಬರೆ
ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ
ಸಂದ ಖಗಮೃಗವಲ್ಲಿ ನೆರೆದಿರೆ
ಬಂದು ಹೊಕ್ಕರು ಕಾನನವನರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ

೧೩

ಲೋಕಕಧಿಪತಿ ನಳನ ರಾಣಿಗೆ
ಶೋಕ ಪರ್ಬಿದ ತೆರದಿ ಕತ್ತಲೆ
ಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿ
ಭೀಕರಧ್ವನಿಗಳಿಗೆ ಹೆದರಿದ
ಳಾ ಕಮಲಲೋಚನೆಯ ಕಡು ವಿ
ವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು

೧೪

ತರುಣಿಯಂಜದಿರಂಜದಿರು ವಿಧಿ
ಬರೆದ ಬರೆಹವಿದೆನುತ ವೃಕ್ಷದ
ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ
ವರರತುನಮಚದಲಿ ಪವಡಿಸಿ
ಪರಮಸುಖವಿಹ ಸತಿಗೆ ವಿಧಿಯಿದು
ಹರಹರಾಯೆನುತರಸ ಕಂಬನಿದುಂಬಿದನು ಮರುಗಿ

೧೫

ಎಲ್ಲರೋಪಾದಿಯ ಪತಿವ್ರತೆ
ಯಲ್ಲವೀ ದಮಯಂತಿ ಬಿಡುವವ
ಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ
ಅಲ್ಲಿ ತಂದೆಯ ಮನೆಗೆ ಹೋಗುವ
ಳಿಲ್ಲಿ ತಾನಿರೆ ಬಿಡಳೆನುತ ಮನ
ದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ

೧೬

ಮರೆದು ಮಲಗಿದಳವಳ ಮಗ್ಗುಲ
ಸೆರಗ ಮೆಲ್ಲನೆ ಜಾರಿಸುತಲಾ
ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ
ಮರುಗಿದನು ಮನದೊಳಗೆ ಹರಿಹರಿ
ವರ ಜಗತ್ಪತಿ ಅಡವಿಯಲಿ ಎ
ಚ್ಚರಿಸದೇ ತಾನೆಂದು ಪೋಗುವೆನೆನುತ ಬಿಸುಸುಯ್ದ

೧೭

ಮಡದಿಯಗಲಿದ ಬಳಿಕ ಹತ್ತೆಂ
ಟಡಿಯ ದಾಂಟುವ ಮರಳಿ ನಿಜಸತಿ
ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವ
ಅಡಸಿ ಬರೆ ದುಃಖದಲಿ ಮೆಲ್ಲಡಿ
ಯಿಡುವ ಸತಿಯನು ನೋಡಿ ಮನದು
ಗ್ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ

೧೮

ಮರುಗುವುದು ಮನವೊಮ್ಮೆ ಕಂಗಳು
ಮರಳಿ ನೋಡುವುದೊಮ್ಮೆ ಸತಿಯಳ
ಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯ
ಕರಗಿತರಸನ ಧೈರ್ಯ ಚಿತ್ತದಿ
ಮುರಿದುದಗ್ಗದ ಮಹಿಮೆ ಶೋಕದ
ಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ

೧೯

ಕರುಣೆದೋರದೆ ನೃಪತಿ ಸತಿಯಳ
ತೊರೆದು ಬಿಸುಟನು ವನದೊಳಗೆ ಹುಲಿ
ಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊ
ಮೊರೆಯ ಲಾಲಿಸಿ ನೋಳ್ಪೆನೆಂದುರು
ತರದ ಪ್ರೇಮದಿ ಬಂದು ಸತಿಗೆ
ಚ್ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ

೨೦

ನಳಿನಮುಖಿ ಮೈಮುರಿದು ನಿದ್ರೆಯ
ತಿಳಿದು ಮೆಲ್ಲನೆ ನೋಡಿದಳು ಎಡ
ಬಲವನೀಕ್ಷಿಸಿ ಪತಿಯ ಕಾಣದೆ ಬಲಿದ ಮೂರ್ಛೆಯಲಿ
ಮಲಗಿದಳು ಮೈಮರೆದು ನಿಮಿಷಕೆ
ತಿಳಿದು ಕಾಣದೆ ಕಾತರದಿ ಹ
ಬಲಿಸಿ ಹಲುಬಿದಳಲ್ಲಿ ಗಿರಿತರುನಿಕರಮಧ್ಯದಲಿ

೨೧

ಹಾ ರಮಣ ನಳನೃಪತಿ ಹಾ ರಣ
ಧೀರ ಸದ್ಗುಣಹಾರ ರಿಪುಸಂ
ಹಾರ ನಿತ್ಯೋದಾರ ನಿರ್ಮಿಳಸತ್ಯಸಂಚಾರ
ಘೋರಕಾನನದೊಳಗೆ ನಂಬಿದ
ನಾರಿಯನು ಬಿಸುಡುವರೆ ತನಗಿ
ನ್ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ

೨೨

ಪೊಡವಿಗಿಳಿವೆನೊ ಹಾಯ್ದು ಪಾವಕ
ನೊಡಲ ಹೊಗುವೆನೊ ಕಾಳಕೂಟದ
ಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊ
ಅಡಸಿದಾಪತ್ತಿನಲಿ ಗರಳವ
ಕುಡಿವೆನೋ ತಾನೆನುತ ಸತಿ ಬಾ
ಯ್ಬಿಡುತ ಕಾನನದೊಳಗೆ ತಿರುಗಿದಳಬಲೆ ಶೋಕದಲಿ

೨೩

ಕಾಣಿರೇಯರಸಂಚೆಗಳೆ ನೀವ್
ಕಾಣಿರೇ ನಿಜಪತಿಯ ಶುಕಪಿಕ
ಕಾಣಿರೇ ಮೃಗಪಕ್ಷಿಗಳೆ ನಳಚಕ್ರವರ್ತಿಯನು
ಕಾಣಿರೇ ತರುಲತೆಗಳಿನಿಯನ
ಕಾಣಿರೇ ನೀವೆಂದು ಶೋಕದೊ
ಳೇಣಲೋಚನೆ ಹಲುಬಿದಳು ಹಲವಂಗದಲಿ ಪತಿಯ

೨೪

ಮುಡಿಕೆದರಿ ಹುಡಿಯೊಳಗೆ ಹೊರಳುತ
ಲೊಡಲನೀಡಾಡಿದಳು ಧರೆಯೊಳ
ಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿ
ಮಡದಿಯರು ತನ್ನಂತೆ ಲೋಕದೊ
ಳೊಡಲ ತೆತ್ತವರುಂಟೆ ಶೋಕದಿ
ಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ

೨೫

ಮಾನವಾಧಿಪ ಕೇಳು ಬನದಲಿ
ಮಾನಿನಿಗೆ ಮತ್ತೊಂದು ಕಂಟಕ
ಹಾನಿ ಬಂದುದನೇನನೆಂಬೆನು ಪತಿಗೆ ಬಾಯ್ಬಿಡುತ
ಕಾನನದ ಬಳಿವಿಡಿದು ಬರೆ ಸು
ಮ್ಮಾನದಲಿ ತರಗೆಲೆಯ ಹಕ್ಕೆಯ
ಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ

೨೬

ತರಳೆ ಕಾಣದೆ ಬರುತ ಮೆಟ್ಟಿದ
ಳುರಗಪತಿಯನು ಕೋಪದಲಿ ಮಿಗೆ
ಸುರಿವ ಗರಳದಿ ರೌದ್ರಮಯರೂಪಿನಲಿ ಬಾಲಕಿಯ
ತರುಬಿ ಹಿಡಿದುದು ತವಕದಲಿ ಹಿಮ
ಕರನ ನುಂಗುವ ರಾಹುವಿನವೊಲ್
ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ

೨೭

ಹಾ ರಮಣ ನಳನೃಪತಿ ತನ್ನನ
ದಾರಿಗೊಪ್ಪಿಸಿ ಕಳೆದೆ ಹರಿಹರಿ
ಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥ
ಆರಿಗೊರಲುವೆನಿನ್ನು ಪ್ರಾಣವ
ನಾರು ಕಾವವರಕಟ ಬಿಡಿಸೈ
ವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಳೆ

೨೮

ಶೈಲಶಿಖರದೊಳಿರ್ದು ಕೇಳಿದ
ಬಾಲಕಿಯ ಶೋಕವನು ಬಿಲ್ಲಿನ
ಕೋಲುಗಾರನು ಕರೆದ ಬಿಲ್ಲಿನ ಶಬರನೈತಂದು
ಆ ಲತಾಂಗಿಯ ಪಿಡಿದು ನುಂಗುವ
ಕಾಲಭುಜಗನ ಕಂಡು ನಿಜಕರ
ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ

೨೯

ಹಾಯೆನುತ ಸುರರುಲಿಯೆ ಹಾವಿನ
ಬಾಯೊಳಗೆ ಸಿಲುಕಿರ್ದ ಕಮಲದ
ಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯ
ರಾಯ ಕೇಳೈ ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿ
ದಾಯಿತಬಲೆಗೆ ಮೂರ್ಛೆ ತಿಳಿದುದು ಶಬರಮಂತ್ರದಲಿ

೩೦

ಬಂದು ಕೆಂದಾವರೆಯ ಕೊಳದಲಿ
ಮಿಂದು ನಿಂದಿರೆ ಶಬರನೆಂದನು
ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು
ಇಂದೆನಗೆ ಅಸುವಿತ್ತು ಸಲಹಿದ
ತಂದೆಯಲ್ಲವೆ ನೀನು ಕೇಳು ಪು
ಳಿಂದ ಮುಳಿದರೆ ಶಪಿಸುವೆನು ಹೋಗಂದಳಿಂದುಮುಖಿ

೩೧

ತರುಣಿ ಕೋಪಿಸಿ ನುಡಿಯೆ ಭಯದಲಿ
ಶಿರವ ಬಾಗಿ ಪುಳಿಂದನತ್ತಲು
ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ
ಮರುಗುವಳು ಬನದೊಳಗೆ ಭೂಪನ
ನರಸಿ ಕಾಣದೆ ಬಯಲನಪ್ಪುವ
ಳುರವಣಿಪ ಕಣ್ಣೀರಿನಲಿ ನಡೆತದಳಿಂದುಮುಖಿ

೩೨

ಅರಸ ಕೇಳಾಶ್ಚರ್ಯವನು ಸತಿ
ಬರುತಿರಲು ಕಾನನದಿ ನೆರೆದಿಹ
ಮರುಳು ಬಳಗವು ಭೂತಬೇತಾಳಗಳು ತೊಲಗಿದುವು
ಶರಭ ಮೊಲ ಕಾಡಾನೆ ಸಿಂಹಗ
ಳಿರದೆ ಜಾರಿದುವಲ್ಲಿ ಸತಿಯಳ
ಪರಮಪಾತಿವ್ರತ್ಯಮಹಿಮೆಗೆ ನೃಪತಿ ಕೇಳೆಂದ

೩೩

ಮುಂದೆ ಕಂಡಳು ಹೊಳೆವ ತಾಪಸ
ವೃಂದವನು ಕಣ್ಣೀರ ಸುರಿಸುತ
ಬಂದವಳನುರೆ ಕೇಳಿದರು ಮುನಿವರರು ಕರುಣದಲಿ
ಇಂದುಮುಖಿ ನೀನಾರು ಇಲ್ಲಿಗೆ
ಬಂದ ಹದನೇನೆನಲು ಶೋಕದಿ
ನೊಂದು ನುಡಿದಳು ಮುನಿಗಳಿಗೆ ಕೈ ಮುಗಿದು ವಿನಯದಲಿ

೩೪

ಏನನೆಂಬೆನು ತನ್ನ ಪುಣ್ಯದ
ಹಾನಿಯನು ಚಿತ್ತವಿಸಿ ಕರುಣದಿ
ಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನು
ಆ ನರೇಂದ್ರನ ಮಡದಿ ತಾ ಮು
ನ್ನೇನ ನೋಂತೆನೊ ಪತಿಯಗಲಿ ಘನ
ಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು

೩೫

ಭೂತಳವ ನಳನೃಪತಿ ದ್ಯೂತದಿ
ಸೋತು ಪುಷ್ಕರಗಿತ್ತು ಸತ್ಯದ
ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು
ಧಾತುಗುಂದದೆ ಪತಿಯ ಕಾಣದೆ
ಭೀತಿಯಲಿ ನಿಮ್ಮಡಿಯ ಕಂಡೆನು
ಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ

೩೬

ನೆನೆದುದಂತಃಕರಣ ಕೇಳುತ
ಮುನಿಗಳೆಂದರು ತಾಯೆ ಶೋಕದಿ
ಕನಲಿ ಕಂಗೆಡಬೇಡ ನಿಜಪತಿರಾಜ್ಯಸಿರಿಸುತರು
ನಿನಗೆ ಬಂದಪರಿನ್ನು ಯೋಗದ
ಮನದಲರಿದೆವು ನಾವು ಅಂಜದಿ
ರೆನುತ ಪೇಳಿಯದೃಶ್ಯವಾದರು ಮುನಿಗಳೊಗ್ಗಿನಲಿ

೩೭

ಆ ತರುಣಿ ಬೆರಗಾಗಿ ಕನಸಿನ
ರೀತಿಯಾಯ್ತಕಟಕಟ ಮೌನಿ
ವ್ರಾತವೆತ್ತಲು ಸರಿದುದೋ ವಿಸ್ಮಯವಲಾಯೆನುತ
ಆ ತಳೋದರಿ ಪತಿಯ ಕಾಣದೆ
ಕಾತುರದಿ ಬರುತಿರಲು ಕಂಡರು
ನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ

೩೮

ಆರಿವಳು ವನಲಕ್ಷ್ಮಿಯೋ ಸುರ
ನಾರಿಯೋ ಮಾರಾಂಗನೆಯೊ ಮದ
ನಾರಿಸತಿಯೋ ಸರಸತಿಯೊ ಮೇಣಸುರಮಾನಿನಿಯೊ
ಆರ ವನಿತೆಯೊ ಮಾಯರೂಪಿನ
ಭೂರಿಭೂತವೊ ತಿಳಿಯಲರಿದಿವ
ಳಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು

೩೯

ನೋಡಿದಳು ದಮಯಂತಿ ಭೀತಿಯ
ಲೋಡುತಿಹ ಬೀಡಿಕೆಯ ವೈಶ್ಯರ
ಹೇಡಿತನವನು ಕಂಡು ನಸುನಗುತಲ್ಲಿಗೈತಂದು
ಓಡಲೇತಕೆ ನಿಮಗೆ ಉಪಹತಿ
ಮಾಡುವಳು ತಾನಲ್ಲ ಜಗಕತಿ
ರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ

೪೦

ವೀರಸೇನನ ತನಯ ನಳನೃಪ
ಧಾರಿಣಿಯನುರೆ ಸೋತು ಕಾರ್ಯದ
ಕಾರಣದಿ ನಡೆತಂದನಡವಿಗೆ ತನ್ನನಗಲಿದನು
ದಾರಿದಪ್ಪಿದೆನಿಲ್ಲಿ ನಿಮ್ಮನು
ಸೇರಿದೆನು ಪರದೇಶಿ ತನಗೊಂ
ದೂರ ತೋರಿರೆ ನೀವೆನುತ ತುಂಬಿದಳು ಕಂಬನಿಯ

೪೧

ತಾಯೆ ನಿಮ್ಮ ಪದಾಬ್ಜದರ್ಶನ
ವಾಯಿತೆಮಗಿಂದಿನಲಿ ಧನ್ಯರು
ಈಯವಸ್ಥೆಗೆ ತಂದುದೇ ವಿಧಿ ನಿಮ್ಮನೆನುತೆರಗಿ
ನೋಯದಿರಿಯಿದೆ ಚೈದ್ಯಪುರವೆಂ
ದಾ ಯುವತಿಯೊಡಗೊಂಡು ಬರುತಿರೆ
ತೋಯಜಾಪ್ತನು ಪಸ್ಚಿಮಾಂಬುಧಿಗಿಳಿದನೊಲವಿನಲಿ

೪೨

ಹಗಲು ಸವೆದುದು ಹೊಂಬಿಸಿಲು ನೆರೆ
ದೆಗೆದುದತಿವೇಗದಲಿ ಕತ್ತಲೆ
ಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿ
ಸುಗುಣೆ ದಮಯಂತಿಯಳ ನೋಡಲು
ಸೊಗಸಿ ಬಂದನಿಮಿಷರವೋಲ್ ತಾ
ರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ

೪೩

ಅವನಿಪತಿ ಕೇಳ್ ವೈಶ್ಯಕುಲಸಂ
ಭವರು ಹಾಯ್ಕಿದರಲ್ಲಿ ಗೂಡಾ
ರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿ
ಅವಧಿ ಬಂದುದನೇನನೆಂಬೆನು
ಕವಿದು ಕಾಡಾನೆಗಳು ಮಡುವಿಗೆ
ತವಕದಿಂ ನೀರಡಿಸಿ ಬಂದುದು ಸಿರಿಗಳದದಲಿ

೪೪

ಮುರಿದು ತರುಗಳನಿಡುತ ಮೆಳೆಗಳ
ನೊರಸಿ ಮೆಟ್ಟುತ ಕೋಡಿನಲಿ ಬಲು
ಮೊರಡಿಗಳ ಕಿತ್ತಿಡುತ ಸೊಂಡಿಲ ತೂಗಿ ಮದವೇರಿ
ಕರಿಗಳೈತರೆ ಕಂಡು ಭೀತಿಯೊ
ಳಿರದೆ ಹಾಯ್ದರು ಕೆಲವರು ಧೈರ್ಯದೊ
ಳುರುಬಿ ನಿಂದರು ಸಬಳದಲಿ ಹೊಕ್ಕಿರಿದು ಕಾದಿದರು

೪೫

ತೂಳಿದುವು ಮದಕರಿಗಳವರನು
ಸೀಳಿ ಹಾಯ್ದುವು ಕೆಲರ ಮುಮ್ಮೊನೆ
ಯಾಳು ಕವಿದುದು ಹೊಕ್ಕು ಕಾದಿದರತುಳಭುಜಬಲರು
ತಾಳಬಲ್ಲರೆ ಕೆಲರು ಕರಿಗಳ
ದಾಳಿಗಿದಿರೇ ಮುರಿದು ಹಾಯ್ದರು
ಹೇಳಲೇನದನರಸ ತೆಗೆದೋಡಿದರು ದೆಸೆದೆಸೆಗೆ

೪೬

ತರಹರಿಸಿ ನಿಲಲರಿದು ಕರಿಗಳ
ಉರುಬು ಘನಪಿಟ್ಟಣಿಸಿ ಕೊಲುತಿದೆ
ಹರಣವನು ಹೋಗಾಡಲೇಕೆಂದುಳಿದ ಪಟುಭಟರು
ತೆರಳಿತಲ್ಲಿಯದಲ್ಲಿ ವಾಣಿ
ಜ್ಯರು ಮುರಿದು ಬರೆ ಕಾಣಿತಾ ವೈ
ಶ್ಯರಿಗಧಿಪ ಚಿಂತಿಸಿದ ಹದನೇನೆಂದು ಮನದೊಳಗೆ

೪೭

ಅಮ್ಮ ಕೇಳೀ ಮದಗಜಂಗಳು
ನಮ್ಮ ಕೊಲುತಿವೆ ಹದನ ಕಾಣೆನು
ನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನು
ನಿಮ್ಮನಿಲ್ಲಿಗೆ ತಂದುದೇ ವಿಧಿ
ಬೊಮ್ಮಬರೆಹವ ಮೀರುವವರಾ
ರಮ್ಮಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ

೪೮

ಜನನವೇ ವರಭೀಮರಾಯನ
ಮನೆಯೊಳಗೆ ನಳಚಕ್ರವರ್ತಿಯೆ
ಇನಿಯನಗ್ಗದ ವೀರಸೇನನೆ ಮಾವನಾಗಿರಲು
ವನದೊಳಿಭಕರಿಗಳಿಗೆ ತಾ ನಿಜ
ತನುವ ತೆರಬೇಕೆಂಬ ಕಾರಣ
ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ

೪೯

ಎನುತ ಕಣ್ಣೆವೆ ಬಿಗಿದು ಮನದಲಿ
ನೆನೆದಳಚ್ಯುತನಂಘ್ರಿಕಮಲವ
ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ
ವನಕೆ ಮರಳಿದುವವರನೆಲ್ಲರ
ವನಿತೆ ಸಂತೈಸಿದಳು ದೈವವ
ನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ

೫೦

ಕಳೆದರದಿನ ರಾತ್ರಿಯನು ರವಿ
ಬೆಳಗಿದನು ಪೂರ್ವಾದ್ರಿಯಲಿ ಸಂ
ದಣಿಸಿ ನಡೆದರು ಮುಂದೆ ಕಂಡರು ಚೇದಿಪಟ್ಟಣವ
ಹೊಳೆವ ಹೇಮದ ಸೌಧಗಳ ತಳ
ತಳಿಪ ನೆಲೆಯುಪ್ಪರಿಗೆಗಳ ಕಂ
ಡೊಲಿದು ಮನಹರುಷದಲಿ ಹೊಕ್ಕರು ಸತಿಸಹಿತ ಪುರವ

೫೧

ರಸದ ಲೇಪದ ಮಿಸುನಿಯೊ ಮಲಿನ
ವಸನದಲಿ ಹುದುಗಿರ್ದ ರತ್ನವೊ
ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ
ಶಶಿವದನೆ ಬರುತಿರಲು ಪುರಜನ
ವೊಸೆದು ನೋಡಿದುದಲ್ಲಿಗಲ್ಲಿಗೆ
ಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ

೫೨

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ
ನಡು ಬಳುಕೆ ವೃತ್ತಸ್ತನಕೆ ಸೋ
ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ
ಕುಡಿತೆಗಂಗಳ ನೋಟ ಕಾರ್ಮುಗಿ
ಲೊಡೆದು ಮಿಂಚುವ ಮಿಂಚಿನಂದದಿ
ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ

೫೩

ಹೇಮದುಪ್ಪರಿಗೆಯಲಿ ನೃಪಸತಿ
ಕಾಮಿನಿಯರೋಲಗದೊಳೊಪ್ಪುತ
ತಾಮರಸದಳನಯನೆ ದಮಯಂತಿಯನು ತಾ ಕಂಡು
ಈ ಮಹಾಸತಿ ಯಾವಳೋ ಸು
ತ್ರಾಮನರಸಿಯೊ ಎನುತ ಕರೆಸಿದ
ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ

೫೪

ತಾಯೆ ನೀನಾರಾವ ದೇಶದ
ರಾಯನರಸಿಯಿದೇನು ನಿನಗೀ
ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲು
ಆ ಯುವತಿ ಕಣ್ಣೀರಿನಲಿ ಪೂ
ರಾಯ ಶೋಕದಲೆಂದಳಾ ತರ
ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು

೫೫

ಕ್ಷಿತಿಯನೆಲ್ಲವ ಸೋತು ಜೂಜಲಿ
ಪತಿ ಬನಕೆ ಬಂದೆನ್ನನಗಲಿದ
ಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆ
ಹಿತವರಾರನು ಕಾಣೆ ನೀವೇ
ಗತಿಯೆನಗೆ ಪರದೇಶಿಯನು ಪರ
ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ

೫೬

ನುಡಿಯ ಕೇಳುತ ಚೈದ್ಯಭೂಪನ
ಮಡದಿ ನೂಪುರ ಘಲಿರುಘಲಿರೆನ
ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ
ಬಿಡು ವ್ಯಥೆಯ ವರಭೂಷಣಂಗಳ
ತೊಡು ದುಕೂಲವನುಡು ಸುಮಾಲ್ಯವ
ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ

೫೭

ದೇವಿ ನಿಮ್ಮುಪಚಾರವೇ ಸಂ
ಭಾವನೆಯಲಾ ನಮಗೆ ಬೇರಿ
ನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ
ಸೇವೆಯಲಿ ತಾನಿಹೆನು ಹೀನವ
ನಾವು ಬಳಸುವರಲ್ಲ ತನ್ನನು
ಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ

೫೮

ಎನಲು ನಸುನಗುತೆಂದಳಾ ಮಾ
ನಿನಿಗೆ ತಮ್ಮಿಂದಾಗದುಪಹತಿ
ನಿನಗೆ ಪೇಳೆವು ಹೀನಕೆಲಸವ ಚಿಂತೆ ಬೇಡಿನ್ನು
ತನಗೆ ಮಗಳು ಸುನೀತಿಯಾಕೆಯ
ಮನೆಯೊಳಿರು ಸೈರಂಧ್ರಿತನದಿಂ
ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ

೫೯

ಚೇದಿಭೂಪನ ಮಡದಿ ತನ್ನ ಸ
ಹೋದರಿಯ ಸುತೆಯೆಂದು ಬಲ್ಲಳೆ
ಮೇದಿನಿಯೊಳಿವಳಾರ ಸತಿಯೆಂದರಿಯದಾಕೆಯನು
ಆದರಿಸಿ ಸಲಹಿದಳು ಮಗಳೋ
ಪಾದಿಯಲಿ ದಮಯಂತಿಯನು ಮನ
ಭೇದವಿಲ್ಲದೆ ಕರುಣದಿಂದಂಗನೆಯ ನೃಪನರಸಿ

೬೦

ಮನದ ದಗೆಯಡಗಿತು ಸುನೀತಿಯ
ಮನೆಯೊಳಿದ್ದಳು ಭೇದವಿಲ್ಲದೆ
ಅನುದಿನದೊಳಾಹಾರ ನಿದ್ರಾಂಗನೆಯ ತಾನುಳಿದು
ವನಜನಾಭನ ಕರುಣದಲಿ ಬಂ
ದಿನಿಯನೆಂದಿಗೆ ಮುಖವ ತೋರುವ
ನೆನುತ ಚಿಂತಿಸುತಿರ್ದಳಾ ವರಪುರದ ಚೆನ್ನಿಗನ

೬೧