EN | KA

III

Hadibadeya Dharma

ಶ್ರೀಭೂಮಿನೀಳಾನಾಥನಿಗನುಪಮ
ವೈಭವ ವೈಕುಂಠಪತಿಗೆ
ಸ್ವಾಭಾವಿಕ ಶುಭಗಣನಿಧಿಗಂಬುಜ
ನಾಭನಿಗಾನೆರಗುವೆನು

ದೇವ ಮಾನವ ಮೃಗ ನಗರೂಪದ ವಾಸು
ದೇವನ ವಿಭವಂಗಳನು
ಆ ವಿಧದೊಡಲವೆತ್ತನುಸರಿಸುವ ಲ
ಕ್ಷ್ಮೀವಧುವನು ವಂದಿಪೆನು

ಪತಿಪಾದಭಕ್ತೆಯರೆನಿಸಿ ಬಣ್ಣನೆವೆತ್ತ
ಸತಿಯರೊಲಿದು ಸಮನಿಸುವ
ಪತಿಶುಶ್ರೂಷೆಯ ಬಗೆಯನರಿತು ಸಂ
ಗತಿಗೈದದನು ಬಣ್ಣಿಪೆನು

ಪತಿಯೆ ಪರಮಗುರು ಪತಿಯೇ ದೇವತೆ
ಪತಿಯೇ ಸದ್ಗತಿಯೆಂದು
ಪತಿಯ ಪಾದಾಂಬುಜದೊಳು ಭಕ್ತಿಗೈವುದು
ಸತಿಯರ ಧರ್ಮದ ಸಾರ

ಪತಿಯನೊಲವರಿತು ಪತಿಯ ಸೇವೆಯೊಳಿದ್ದು
ಪತಿಯೂಳಿಗಗಳನೆಸಗಿ
ಪತಿಯಾಣತಿಯ ಬಂದಿಯೊಳಡಗಿ‍ರ್ಪುದು
ಸತಿಯ ಧರ್ಮದ ಸರ್ವಸ್ವ

ವ್ರತ ಹೋಮ ನಿಯಮೋಪವಾಸ ದಾನಂಗಳೆಂ
ದತಿಶಯವಡೆದ ಧರ್ಮಗಳು
ಪತಿಶುಶ್ರೂಷೆಗೆ ಪಡಿಯಲ್ಲೆಂದಿದ
ರತಿಶಯವರಿತಾಚರಿಪುದು

ಪ್ರತಿಮೆಯ ರೂಪದ ಪಂಕಜನಾಭಗೆ
ನತಿಗೈದು ನಲವೇರುವಂತೆ
ಪತಿಯ ರೂಪದೆ ತನ್ನ ಪಾಲಿಗೆ ಬಂದ ಶ್ರೀ
ಪತಿಯ ಪಾದವ ಭಜಿಸುವುದು

ಪಗಲಿರುಳೆನ್ನದೆ ಪತಿಯಾಣತಿಯೊಳು
ಮೊಗದಿರುಹದೆ ಮೊನೆಗೊಳದೆ
ಬಗೆದೆಗೆಯದೆ ತನ್ನ ಭಾಗ್ಯದ ಫಲವೆಂದು
ಬಗೆದು ಭಕ್ತಿಯೊಳೆಸಗುವುದು

ಮಾಯವನನುಗೊಳಿಸದೆ ಮೈಮರಸದೆ
ಕಾಯ ಮನೋವಚನಗಳ
ಆಯಸದಿಂದಳವಳಿಯದೆ ಪತಿಯನು
ಪಾಯದಿಂದುಪಚರಿಸುವುದು

ಒಲಿದು ಪತಿಯ ಮನದೊಲವನಾರೈದು ತಾ
ನಲಸಿಕೆಗೊಳದನುಸರಿಸಿ
ಕುಲಸತಿಯರ ಧರ್ಮ ಕೊನರಿಡೆ ನೇಹವ
ನೆಲೆಗಾಣಿಸಿ ನೆಗಳುವುದು

೧೦

ಇದೊ ನಿನ್ನ ಪತಿ ಬಂದನೆಂಬ ನಲ್ನುಡಿ ಕೇಳಿ
ಮುದವೇರಿ ಮೊಗಸಿರಿವಡೆದು
ಕದುಬಿಯವನ ಸೇವೆಗನುವಪ್ಪ ವಸ್ತುವ
ನೊದವಿಪುದುರ್ವುಗೊಂಡೊಡನೆ

೧೧

ಇಂತು ನೋಡುವೆನಿಂತು ನುಡಿವೆನಿಂತೆಸಗುವೆ
ನಿಂತು ಸೇರುವೆನಿಂತಿರುವೆ
ಇಂತು ಮನ್ನಿಪೆನಿಂತು ಮನಗರಗಿಪೆನೆಂದು
ಚಿಂತಿಪುದೇಕಚಿತ್ತದೊಳು

೧೨

ಮನೆವಾಳ್ತೆ ಮೆಯ್ಯಲಸಿಕೆ ಮಕ್ಕಳ ಮುದ್ದು
ಬಿನದಂಗಳನು ಬಿಟ್ಟೆದ್ದು
ದನಿಗೇಳದ ಮುನ್ನ ತಾನಿದಿರ್ಗೊಂಡವ
ನನುವರಿತನುಸರಿಸುವುದು

೧೩

ಸೋಗೆ ಮುಗಿಲ ಕಂಡು ಸೊರ್ಕುವಂದದೊಳನು
ರಾಗರಸದ ಲಹರಿಯೊಳು
ಬಾಗಿಲಿನೊಳವೊಕ್ಕು ಬಂದನೆಂಬುದುಮತಿ
ವೇಗದೊಳಿದಿರುಗೊಳುವುದು

೧೪

ತಳುವದಚ್ಯುತನಿಗರ್ಚನೆಗೈವಂತಡಿ
ದೊಳೆದು ತೊಡೆದು ದುಗುಲದೊಳು
ಬಳಿಕ ನಡೆದು ಬಂದು ಬಳಲಿಕೆಗಳೆವಂ
ತೊಳುವಾತುಗಳನೊಡರಿಪುದು

೧೫

ಪಸಿವಲಸಿಕೆಗಳ ಪರಿದು ಕೆಲದೆ ನಿಂದು
ನಸುನಾಣ್ಚುತ ನಲವಿನೊಳು
ಒಸೆದೊಲವರಿತೊಯ್ಯನುಚಿತೋಪಚಾರವ
ನೆಸಗುವುದೇಕಚಿತ್ತದೊಳು

೧೬

ಆವ ಪರಿಯ ದೇಸಿಯಾಣ್ಮಗೆ ಬಗೆವರ್ಪು
ದಾ ವಿಧಗಳನಾರೈದು
ಭಾವಿಸಿ ತಿಳಿದುಟ್ಟು ತೊಟ್ಟು ಬಣ್ಣಿಗೆಯಿಂದ
ಭಾವವ ಬಂದಿಗೊಳುವುದು

೧೭

ಇಷ್ಟದೇವತೆಯಿವನೆಂದು ಪತಿಯೊಳು ವಿ
ಶಿಷ್ಟ ಭಾವವ ಬಗೆಗೊಳಿಸಿ
ಕಷ್ಟ ಕಾ‍ರ್ಪಣ್ಯವ ಕಾಣಿಸಿ ಕನಲದೆ
ತುಷ್ಟಿವಡಿಪುದೊಲವರಿತು

೧೮

ಹಿತವಿದು ಶಾಸ್ತ್ರಿವಿಹಿತವಿದು ಮನಕೆ ಸ
ಮ್ಮತವಿದೆಂದೆಂಬ ಮರ್ಮವನು
ಮತಿಯೊಳೆಣಿಸಿ ಮನದನ್ನನ ಸೇವೆಗು
ಚಿತ ವಸ್ತುಗಳನೆ ಚಿಂತಿಪುದು

೧೯

ಮನೆವಾಳ್ತೆಯೆಸಗುವ ಮರ್ಯಾದೆಯನು ತ
ನ್ನಿನಿಯನಿಗಿಂತೆಂದರುಹಿ
ಮನದೊಲವರಿತೊಡಬಟ್ಟುದನೊಡರಿಸಿ
ಮನಬಾರದುದನು ಮರೆವುದು

೨೦

ಗ್ರಾಸ ವ್ಯಸನ ಪರಿಕರಮಿಲ್ಲದಿರೆ ಕ
ಟ್ಟಾಸುರದೊಳು ಗಾಳುಗೆಡದೆ
ಓಸರಿಸುತ್ತೊಯ್ಯನೇಕಾಂತದೊಳೊಮ್ಮೆ
ಬೇಸರಿಸದೆ ಬಿನ್ನವಿಪುದು

೨೧

ಗನ್ನ ಗದುಕುಗಳ ಕಳೆದು ಗರ್ವವ ಬಿಟ್ಟು
ಹನ್ನಸಗಳನು ಹಬ್ಬಿಸದೆ
ತನ್ನ ಬಾಳಿಕೆ ಬಡತನದ ಬಗೆಯನೆಲ್ಲ
ಬಿನ್ನವಿಪುದು ವಿನಯದೊಳು

೨೨

ಮುನಿಯದಿನಿಯನ ಕಡುಮೊನೆವಾತಿಗೆ ನೊಂದು
ಕನಲದೆ ಗಾರುವಡೆಯದೆ
ತನುಮನಗಳ ತನ್ನ ಬಸಗೈದು ದೈನ್ಯವ
ಕೊನರಿಸಿ ತಂಪುಗೊಳಿಪುದು

೨೩

ಪವಣಿಲ್ಲದೆ ಪಲವಗೆ ಮಾತನಾಡದೆ
ಕವೆ ಕೋಡುಗಳನು ಕಾಣಿಸದೆ
ನೆವವಿಲ್ಲದೆ ನೆಗ್ಗಿ ನೆಲಕಿಳಿದೊರಲದೆ
ಸವನಿಸುವುದು ಸಂತಸವನು

೨೪

ಆರಿ ಬೊಬ್ಬಿರಿದಾರಭಟೆಯನಾಚರಿಸದೆ
ಪಾರದೆ ಪರಸಹಾಯವನು
ಪೋರದೆ ಪುರ್ಬುಗಂಟಿಕ್ಕದೆ ಪುಸಿಯದೆ
ಸೇರಿ ಸೇವೆಯನೆಸಗುವುದು

೨೫

ನೋಯಿಸಿ ನುಡಿಸದೆ ನೋಡದುಚಿತಗಳ
ಬೀಯವೆಸಗಿ ಬೇಸರಿಸದೆ
ಆಯವರಿತು ತರಲರಿಯದ ಪತಿಯೊಳ
ಸೂಯೆಗೊಳದೆ ಸುಖಿಸುವುದು

೨೬

ಪೆರತೊಂದು ನೆವದೊಳು ಬಿಸುಪೇರಿದ ಕೋಪ
ದುರುಬಿನಿಂದೊದರುವ ಪತಿಗೆ
ತರಿಸಂದು ತಾನಿದಿರುತ್ತರವೀಯದೆ
ಪರದೆಗೆವುದು ಭೀತಿವಡೆದು

೨೭

ಪತಿಯ ಬುದ್ಧಿಗೆ ಮೋಸ ಬಂದೊಡಮದರಿಂದ
ಖತಿಗೊಂಡು ಗಲಗುವಡಿಸದೆ
ಇತರರಿಯದಂತೇಕಾಂತಸಮಯದೊ
ಳತಿಭಕ್ತಿಯಿಂದರುಹುವುದು

೨೮

ಅನುಚಿತ ಕಾರ್ಯಮನವನೊಡರಿಸೆ ಕಂಡು
ನಿನಗಿದು ನೀತವಲ್ಲೆಂದು
ನೆನೆಯಿಪೆನಲ್ಲದೆ ನೇಮಿಪುದಿಲ್ಲೆಂದು
ವಿನಯವೆರಸಿ ಬಿನ್ನವಿಪುದು

೨೯

ಅತಿಭೀತಿಯಿಂದನುಗೆಟ್ಟು ಪಿಂತೆಗೆಯದೆ
ಮಿತಿಮೀರಿ ಮೇಲುವರಿಯದೆ
ಇತರ ಜನರು ತನ್ನನೇಳಿಸಿ ನಗದಂತೆ
ಪತಿಸೇವೆಗೈದು ಬಾಳುವುದು

೩೦

ಪಿರಿಯರ ಮಗಳೆಂದು ಬಿಜ್ಜೆಗಲಿತೆನೆಂದು
ವರರೂಪವತಿ ತಾನೆಂದು
ಪರಮ ಪಾವನೆಯೆಂದು ಬರಿದೆ ಬೆರೆಯದನು
ಸರಿಸುವುದಾತ್ಮವಲ್ಲಭನ

೩೧

ವ್ರತವೆಸಗುವೆನೆಂದು ಮಿಂದು ಬಂದಿಹೆನೆಂ
ದತಿಶಯದಿಂದನುಗೆಡದೆ
ಪತಿಯ ಪಡಿಗ ಪಾವುಗೆಗಳ ಪಿಡಿದು
ನ್ನತಿವಡೆವುದು ನಾರಿಯರು

೩೨

ಗರತಿಗೆಲಸವೆಂದು ಗೆಲ್ಲಗೊಂಡುರ್ಬದೆ
ಪರಿಚಾರವೆಂದು ಪಳಿಯದೆ
ಪಿರಿದು ಕಿರಿದುಗಳ ಭೇದವೆಣಿಸದೆ
ನಿರವಿಸಿದುದನೆಸಗುವುದು

೩೩

ಮುಡಿಯೊಳು ಪೊತ್ತು ಮುದ್ದಿಸಿದೊಡೇನಡಿಗಳಿಂ
ಪೊಡವಿಗಿಟ್ಟೊರಸಿದೊಡೇನು
ಒಡೆಯನಿಟ್ಟಂತಿರ್ಪುದೊಡವೆಗುಚಿತಮೆಂದು
ನಡೆವುದು ನಲ್ವೆಂಡಿರೊಲಿದು

೩೪

ತನ್ನ ತವರುಮನೆಗೆಲ್ಲ ತಾನೊಡತಿಯೆಂ
ಬುನ್ನತಿವಡೆವುದರಿಂದ
ತನ್ನಿನಿಯನಿಗೂಳಿಗದವಳಪ್ಪುದು ಸಂ
ಪನ್ನತೆಯೆಂದು ಬಗೆವುದು

೩೫

ಆರಯ್ಯೆ ತಂದೆತಾಯಾದೊಡಮೇನುಪ
ಕಾರಿಗಳಾದೊಡಮೇನು
ಆರಾದೊಡಮಾತ್ಮಪತಿಗಾಗದವರನು
ದೂರಮೆನಿಸಿ ತೊರೆದಿಹುದು

೩೬

ಛಲವಿಡಿದೊಂದನೆಳಸಿ ಚಾರಿವರಿಯದೆ
ನೆಲೆವಿಡಿದೊಂದರೊಳಿರದೆ
ನೆಲೆನಿಂದ ನೀರ ತೆಪ್ಪದ ವೋಲು ತೆಗೆದೆಡೆ
ಗಲೆಗೊಳದನುಸರಿಸುವುದು

೩೭

ಕೊನಬಾದೊಡಮೇನು ಕೂರ್ಮೆಯಾದೊಡಮೇನು
ಬಿನದಮಾದೊಡಮೇನು ಬೇರೆ
ಇನಿಯನೇಕಾಂತದೊಳೆಸಗಿದುದನು ತನ್ನ
ಮನಮೊಳೆ ಮರೆಮಾಜುವುದು

೩೮

ಸೆಜ್ಜೆವನೆಯ ಸೇವೆಯೊಂದನುಳಿದು ಮಿ
ಕ್ಕುಜ್ಜುಗಗೈವ ವೇಳೆಯೊಳು
ಸಜ್ಜಾತಿ ಸತಿಯರಿನಿಯರ ಸನ್ನಿಧಿಯೊಳು
ಲಜ್ಜೆವೆರಸಿ ರಂಜಿಪುದು

೩೯

ಪರದೇವತೆಯೆಂದು ಭಕ್ತಿಗೈವುದು ಬಲು
ದೊರೆಯೆಂದುಪಚರಿಸುವುದು
ಗುರುವೆಂದು ವಿನಯಗೂಡಿರ್ಪುದಿನಿಯನೊಳು
ನೆರವೆಂದು ನೆರೆ ನಂಬುವುದು

೪೦

ಮುಳಿದಲ್ಲಿ ಮುಳಿದೆಳಸಿದುದನೆಳಸಿಯಲ್ಲ
ಗಳೆದುದೆಲ್ಲವನಲ್ಲಗಳೆದು
ಬಳಿವಿಡಿದಿನಿಯರ ಪಾದಾರವಿಂದದ
ನೆಳಲಂತೆ ನೇಮದೊಳಿಹುದು

೪೧

ಕೆಳೆಗೊಳ್ಳುವುದು ಸೇವೆಗೈವುದು ನಲ್ಲನ
ಬಳಿ ಸಲುವುದು ಭಜಿಸುವುದು
ಒಳಗುವೇಳುವುದೊಡನಾಡುವುದೊಲಿದೊಲ್ಮೆ
ಗೆಳಸುವುದೇಕವೆನಿಪುದು

೪೨

ಗಣಿಸುವುದವನರಿವೆಯ ಕೌಶಲಗಳ
ಗುಣಿಸುವುದನವ ಗುಣಗಳ
ಎಣಿಸುವುದವನೊಲಿದೆಸಗುವ ನಲ್ಮೆಯ
ತಣಿಸುವುದಿಂತು ಚಿತ್ತವನು

೪೩

ಕೇಳುವುದವನ ಕೀರ್ತಿಯನಾಲಿಪರಿಗೆ
ಪೇಳುವುದವನ ಪೆರ್ಮೆಯನು
ಮೇಳಗೊಳುವುದವನೊಳು ಮೇರೆ ಮೀರದೆ
ಬಾಳುವುದಿಂತು ಭಾಮೆಯರು

೪೪

ಈ ತೆರದೊಳು ನಡೆದಿನಿಯನ ಮನಕೆ ಸಂ
ಪ್ರೀತಿದೋರಿಸುವ ಪೆಂಡಿರಿಗೆ
ಪಾತಿವ್ರತ್ಯದ ಬಗೆ ಬಣ್ಣವೇರಿ ವಿ
ಖ್ಯಾತಿ ಬೆಳೆದು ಬಿತ್ತರಿಪುದು

೪೫

ತಳುವದಡವಿಯೊಳು ತನ್ನ ತಪ್ಪಿಸಿ ಪೋದ
ನಳನೊಳು ನಲ್ಮೆಯನೆಸಗಿ
ಇಳೆಯ ಪೆಂಡಿರೊಳೆಣೆಯಿಲ್ಲದ ಕೀರ್ತಿಯ
ತಳೆದೆಸೆದಳು ದಮಯಂತಿ

೪೬

ಕಾನನದೊಳು ಕಡುಕಷ್ಟವಡೆದು ನೋವು
ಬೇನೆಗಳಿಗೆ ಬೇಸರಿಸದೆ
ಸಾನುರಾಗದೊಳನುಸರಿಸಿ ತನ್ನಿನಿಯನ
ಜಾನಕಿ ಜಸವ ಪಡೆದಳು

೪೭

ದ್ಯೂತಕೇಳಿಯೊಳಜ್ಞಾತವಾಸದೊಳಂದು
ಧಾತುಗುಂದದೆ ಪಾಂಚಾಲಿ
ಓತು ಪಾಂಡವರನೊಲಿಸಿ ಹದಿಬದೆಯರ
ಬೈತಲೆವಣಿಯೆನಿಸಿದಳು

೪೮

ಇಂತು ವಸಿಷ್ಠನೊಳಿರ್ದಳರುಂಧತಿ
ಇಂತತ್ರಿಯೊಳನಸೂಯೆ
ಇಂತಗಸ್ತ್ಯನೊಳು ಲೋಪಾಮುದ್ರೆ ಪೆರತೇ
ನಿಂತಿರ್ದರೆಲ್ಲ ಸಾಧ್ವಿಯರು

೪೯

ಇಂತು ನಡೆದು ಪತಿಗಂತರಂಗೆಯರಪ್ಪ
ಕಾಂತೆಯರಿಗೆ ಕಯ್ಯೊಡೆನೆ
ಸಂತಾನ ಸೌಭಾಗ್ಯ ಸಂಪತ್ತುಗಳನು ಶ್ರೀ
ಕಾಂತನು ಕೈಸೇರಿಸುವನು

೫೦

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಮನ್ನಣೆವಡೆದೆಸೆದುದು ಮೂರನೆಯ ಸಂಧಿ
ಸನ್ನುತ ಗುಣಸಂಬಂಧಿ

೫೧