EN | KA

IV

Hadibadeya Dharma

ನಂದನ ಮೋಹದ ನಂದನ ಸನಕ ಸ
ನಂದನವಂದಿತ ಚರಣ
ಮಂದರಧರ ಮಾಧವ ಗೋವಿಂದ ಮು
ಕುಂದದೇವನೆ ಸಲಹೆನ್ನ

ಎಂದೆಂದುಮಿನಿಯನೊಳೆರೆ ಹೊರೆಯಿಲ್ಲದ
ಚಂದದಿಂದೆರ್ದೆಯೊಳು ನಿಂದ
ಇಂದುಸೋದರಿಗಿಂದೀವರಮಂದಿರೆ
ಗಿಂದಿರೆಗಿಂದು ವಂದಿಪೆನು

ಅತ್ತೆ ಮಾವನು ಮೊದಲಾದ ಪೂಜ್ಯರೊಳನು
ವೃತ್ತಿಗೈದಾತ್ಮವಲ್ಲಭನ
ಚಿತ್ತವರಿತು ಸೇವೆಯೆಸಗುವ ಸತಿಯರ
ವೃತ್ತವ ಬಿತ್ತರಿಸುವೆನು

ತನ್ನ ಪೆತ್ತವರು ಮಿಗಿಲು ತನ್ನವರೊಳು
ತನ್ನ ಪೆತ್ತವರಿಗೆ ಮಿಗಿಲು
ತನ್ನಿನಿಯನ ಪೆತ್ತವರೆಂದವರನು
ಮನ್ನಿಸುವುದು ಮರುಕದೊಳು

ಗಂಡನ ಬಲ್ಮೆಯೊಳತ್ತೆಮಾವಂದಿರ
ಗಂಡನನವರ ಬಲ್ಮೆಯೊಳು
ಅಂಡಲೆಯದೆಯನಿಬರನನುಸರಿಸುವ
ಪೆಂಡಿರ ಜಸ ಪೆರ್ಚುವುದು

ಅತ್ತೆಮಾವಂದಿರೊಳಡಕಮೆನಿಸಿ ಪತಿ
ಚಿತ್ತದಿರವ ಸೆರೆಗೊಂಡು
ಪೆತ್ತ ತಾಯನು ಪೆಸರೆನಿಸುವುದಿಳೆಯೊಳ
ಗುತ್ತಮನಾರಿಯರೊಲಿದು

ಎಂತು ಕಾಪಿಟ್ಟೊಡಮೇನ ಬೆಸಸಿದೊಡ
ಮಂತರಂಗದೊಳನುಗೆಡದೆ
ಚಿಂತಿಸಿಯಳಲದೆ ಸಿಡಿಮಿಡಿಗೊಳದತಿ
ಸಂತೋಷದೊಳು ಸಮ್ಮತಿಪುದು

ಪೊತ್ತುಪೊತ್ತಿಗೆ ಪೋಗಿ ಪೊಡಮಟ್ಟು ನಸು ತಲೆ
ಗುತ್ತಿ ನಾಣ್ಚುತ ನಲವಿನೊಳು
ಒತ್ತಿನೊಳುಪಚರಿಸುತ್ತಿರ್ದವರೊಲಿ
ದಿತ್ತುದರಿಂದ ತಣಿವುದು

ಉತ್ತರಕುತ್ತರವಿತ್ತಿದಿರಾಡದೆ
ಒತ್ತಿನುಡಿಯದೊತ್ತರಿಸದೆ
ಮತ್ತವರಿತ್ತಾಣತಿಯ ಮಸ್ತಕದೊಳು
ಪೊತ್ತು ಪೂಜಿಸುತೆಸಗುವುದು

ಅತ್ತಿತ್ತ ನೋಡದೆ ಅವಮತಿಗೈಯದೆ
ಮತ್ತೆಯಾಗದೆ ಮರೆತಿರದೆ
ಅತ್ತೆಮಾವಂದಿರಾಣತಿಯನಾಲಿಪುದೇಕ
ಚಿತ್ತದೊಳೇಕಪತ್ನಿಯರು

೧೦

ಕೂಗಿ ನಡೆಯದೆ ಕೊಬ್ಬದೆ ಕೋಪವೆಸಗದೆ
ಮೂಗುವಡದೆ ಮೋಡಿಗೊಳದೆ
ಲೋಗರುಚಿತಮೆನಲೊಯ್ಯನೊಯ್ಯನೆಯನು
ವಾಗಿ ನುಡಿದವರೊಡನೆ

೧೧

ಮುದುಪರರಿಯರೆಂದು ಮುಂದುಗೆಟ್ಟಾಡದೆ
ಚದುರರಲ್ಲೆಂದು ಜರಿಯದೆ
ಇದು ಹಿತವೆಂದವರಿತ್ತುಪದೇಶವ
ನೆದೆಗೊಳಿಸುವುದೆಸಗುವುದು

೧೨

ಪಾಡುವಡಿಪರೆಂದು ಪರಿಹರಿಸದೆ ಚುನ್ನ
ವಾಡದೆ ಮನೆವಾಳ್ತೆಯನು
ಮಾಡುವುದವರ ಸಮ್ಮತದಿಂದ ಸತಿಯರೊ
ಳೀಡುಜೋಡಿಲ್ಲೆನಿಸುವುದು

೧೩

ಮಾನಗೊಳದೆ ಮೈಲಿಗೆಯೆಂಜಲೆಂದನು
ಮಾನಗಯ್ಯದೆ ಮನವೊಲಿದು
ಬೇನೆಬಿದ್ದಿರೆ ಪೇಸದೆ ಬೇಸರದೆ ಸ
ನ್ಮಾನದೊಳುಪಚರಿಸುವುದು

೧೪

ಹಮ್ಮುಗೊಳದೆ ಹದವಳಿಯದೆ ಮಾವನ
ಸಮ್ಮುಖದೊಳು ಮಂಡಿಸದೆ
ಹೆಮ್ಮೆವಾತಾಡದೆ ಹೆಕ್ಕಳಿಸದೆ ಚಿತ್ತ
ಸಮ್ಮತಿಯರಿತೆಸಗುವುದು

೧೫

ಆವ ವೇಳೆಯೊಳಾವುದನುಗೊಳಲೆಳಸಿದ
ರಾ ವೇಳೆಯೊಳವನೆಲ್ಲ
ಸಾವಧಾನದೊಳು ಸಂಗತಿಗೊಳಿಸುವುದಿಷ್ಟ
ದೇವತೆಯೆಂದೆಣಿಸುವುದು

೧೬

ಒತ್ತಿನೊಳಿದ್ದೊಲವರಿತಡಿಗಳನೊಯ್ಯ
ನೊತ್ತುವುದೊಂದುವೆರೆವುದು
ಸುತ್ತುಗೆಲಸವ ಸೊಲ್ಲಿಸದೆಸಗುವುದಿಂ
ತತ್ತೆಯನನುವರ್ತಿಸುವುದು

೧೭

ಬೀಸುವುದೊಮ್ಮೆ ಪಿಡಿದು ಬಿಜ್ಜಣಿಗೆಯ
ಪಾಸುವುದೊಮ್ಮೆ ಪಾಸಿಗೆಯ
ಸೂಸುವುದೊಮ್ಮೆ ಪನ್ನೀರ ಸುಗಂಧವ
ಪೂಸುವುದೊಮ್ಮೆ ಪೂಜುವುದು

೧೮

ತಾನೆ ನೀರೆರೆದು ಮೀಯಿಸುವುದು ಮತ್ತೊಮ್ಮೆ
ತಾನೆ ತೊಡಿಗೆ ತೊಡಿಸುವುದು
ಏನೆಸಗುವೆನೆಂದಿದಿರೊಳಿದ್ದೆಲ್ಲವ
ಸಾನಂದದೊಳು ಸಮನಿಪುದು

೧೯

ಉಡುಗೆ ತೊಡುಗೆಯೂಟ ಮೀಹದೊಳತಿಶಯ
ವಡುವೆನೆಂದೊಡಲು ಮರೆಯದೆ
ಪಡಿಯಹೆನೆಂದು ಬರೆಯದವರಿಗೆ ತಾನು
ಕಡಿಮೆಯೆನಿಸಿ ಕಾಣಿಸುವುದು

೨೦

ಕುತ್ತವೆಣಿಸಿ ಕೋಪಗೊಳದೆ ಕೂರ್ತಿವರೆಮ್ಮ
ತೆತ್ತಿಗರೆಂದೆರ್ದೆಗೊಳಿಸಿ
ಅತ್ತಿಗೆ ನಾದಿನಿಯರೊಳಂತರಂಗವ
ಪತ್ತುಗೆಗೊಳಿಸಿ ಬಾಳುವುದು

೨೧

ಅಂದಂದಿಗಿನಿಯನ ಮೆಯ್ಯಾರೈಕೆಯ
ನೆಂದೆಂದಿಗು ಬೇಸರದೆ
ಒಂದೆ ನಾವೆಯೊಳೇರಿದವರಂತೆ ಸವತಿಯ
ರೊಂದೆನಿಸಿರ್ಪುದೊಪ್ಪದೊಳು

೨೨

ಪೋರದೆ ಪುರುಡಿಸದೊರ್ವರೊಳನು
ಸಾರಮೆನಿಸಿ ಸಮ್ಮತದೊಳು
ಓರಗೆಗೆಳದಿಯರೊಂದುವೆರಸುವಂ
ತೋರಗಿತ್ತಿಯರೊಂದಿಹುದು

೨೩

ತಂದೆ ತಾಯನು ಬಿಟ್ಟು ತನ್ನ ಕೈಗೆಡೆಯಾಗಿ
ಬಂದ ಸೊಸೆಯರ ಬಾಧಿಸದೆ
ಅಂದಂದಿಗುಡಿಗೆ ತೊಡಿಗೆಯೂಟ ಮೀಹಗ
ಳಿಂದ ಸಂತಸಗೊಳಿಸುವುದು

೨೪

ಬಸವಳಿಸದೆ ಪಳಿಯದೆ ಭಂಗವಡಿಸದೆ
ಹಸಗೆಡಿಸದೆ ಹುದುಗಿಸದೆ
ಬಸಿರೊಳು ಬಂದ ಪೆಣ್ಮಕ್ಕಳ ಮರುಕವ
ಸೊಸೆಯರೆಡೆಯೊಳೆಸಗುವುದು

೨೫

ಬಸಿರ ನಿಟ್ಟಿಸಿಯುಣಬಡಿಸುವುದೊಳುಮುಡಿ
ಯೆಸಕವರಿತು ಮೀಯಿಸುವುದು
ಒಸೆದು ಸಿಂಗರಿಸುವುದೊಲಿದು ನೋಡುವುದಿಂತು
ಸೊಸೆಯರ ಸುಖಬಡಿಸುವುದು

೨೬

ಒಲಿದು ಬಸಿರಿಯಾವಾವುದ ಬಯಸುವ
ಳಲಸದೆಯವನೆಲ್ಲವನು
ಪಲವಗೆಯೊಳು ಪವಣಿಸಿಯವಳಿಚ್ಛೆಯ
ಸಲಿಸಿ ಸಂತಸಗೊಳಿಸುವುದು

೨೭

ಅಲೆಗೈವ ಬಗೆಯನರುಹಿ ತಂದೆ ತಾಯನು
ಪಲಬಗೆಯೊಳು ಬಳಲಿಸದೆ
ನಲವಿನೊಳಿನಿಯನ ನಲ್ಮೆಯನೊರೆವುದು
ಕುಲದೊಳೊಗೆದ ಕುವರಿಯರ

೨೮

ಅಕ್ಕತಂಗಿಯರಣ್ಣ ತಮ್ಮಂದಿರು ತಮ್ಮ
ಮಕ್ಕಳು ಮೊಮ್ಮಕ್ಕಳೊಳು
ಕಕ್ಕಸಗೊಂಡು ಕನಲಿ ಕಾದದೆ ಮಿಗೆ
ಯಕ್ಕರನನುಗೊಳಿಸುವುದು

೨೯

ತಾಯ ತಂದೆಯ ದೆಸೆ ಗಂಡನ ದೆಸೆಯಂ
ಬೀಯೆರಡಿರವಿನೊಳೆಸೆವ
ಕಾಯ ಬಾಂಧವರ ಕಣ್ಣೆರಡೆಂದು ಕಾಂಬುದ
ಸೂಯೆಗೊಳದೆ ಸುಖಿಸುವುದು

೩೦

ಬುದ್ಧಿಗಲಿಯಲರಿಯದ ಪಸುಮಕ್ಕಳ
ಮುದ್ದಿಸಿ ಮುದವೇರುವುದು
ಬುದ್ಧಿಗಲಿವ ಕಾಲದೊಳು ಪೊಯ್ದು ಬಯ್ದು ನ
ಲ್ಬುದ್ಧಿಗಳನೆ ಬೋಧಿಸುವುದು

೩೧

ಓದುಗಲಿವ ಮಕ್ಕಳಿಗೂಟ ಮೀಹವ
ನಾದರದಿಂದನುಗೊಳಿಸಿ
ಓದಿಸುವರು ಕೊಂಡು ಬಯ್ದೊಡಮವರನು
ಮೂದಲಿಸದೆ ಸಮ್ಮತಿಪುದು

೩೨

ಬಸಿರೊಳು ಬಂದ ಕುವರನಾದೊಡಮೇನು
ಪೊಸವರೆಯದ ಪುರುಷನನು
ಒಸೆದು ನಿಟ್ಟಿಸಿಯೊಡಲೋಜೆಯೊಳ್ಪುಗಳ ಬ
ಣ್ಣಿಸಲಾಗದು ಭಾಮೆಯರು

೩೩

ಗುರುಪಿರಿಯನು ತಂದೆ ಸೋದರನಣುಗನು
ಪೊರೆವರಸಾದೊಡಮೇನು
ಬರಿಸ ಪನ್ನೆರಡಾದ ಬಳಿಕಾರೊಳಮೊಂದು
ವೆರಸದೆ ಪೆರದೆಗೆದಿಹುದು

೩೪

ಪಸಿದು ಬಳಲಿ ಪರದೇಸಿ ಬಾಯ್ವಿಡೆ ಕಂ
ಡಸಮಯವೆಂದಬ್ಬರಿಸದೆ
ಬಿಸುವಾತಿನೊಳು ಬೇಯಿಸದಿದ್ದ ಮಾತ್ರವ
ನೊಸೆದೀವುದೊಳ್ವಾತಿನೊಳು

೩೫

ನೆರೆಮನೆ ಮುಮ್ಮನೆ ಗರತಿಯರೊಲಿದೊಮ್ಮೆ
ಬರೆ ತನ್ನ ಮನೆಯ ಬಾಗಿಲಿಗೆ
ಕರೆದಾದರಿಸಿ ಕೈಲಾಪ ತೆರದಿ ಸ
ತ್ಕರಿಸಿ ಭರದೆ ಕಳುಪುವುದು

೩೬

ಮೊನೆಗಾತಿ ಮುಗುದೆ ಮುಸುಂಡಿಯಾಗಲಿ ನೆರೆ
ವನೆ ಗರತಿಯ ನೀಕರಿಸದೆ
ಮನೆಗೆ ಬಂದೆಡೆಯೊಳು ಮನ್ನಿಸಿ ಮನಮೊಲಿ
ದನುವರಿತಾದರಿಸುವುದು

೩೭

ತನ್ನ ಮನೆಯ ಮದುವೆಯೊಳು ಮಂಗಲದೊಳು
ತನ್ನ ಬಾಂಧವರೆಲ್ಲರನು
ಅನ್ನ ಪಾನಂಗಳಿಂದಾದರಿಪುದು ಮತ್ತೆ
ಪೊನ್ನುಡೆಯಿತ್ತು ಪೂಜುವುದು

೩೮

ಅರಿಯದೂಳಿಗವೆಣ್ಗಳು ತಪ್ಪುಗೈದಡಿ
ಗೆರಗಿದೊಡನೆ ಮನಗರಗಿ
ಮರೆತದನೆಲ್ಲವ ಮಕ್ಕಳೊಳೆಸಗುವ
ಮರುಕವೆರಸಿ ಮನ್ನಿಪುದು

೩೯

ಮುಳಿದವರೊಳು ಮೊಗವಂಟಿ ಮುಗ್ಗದೆಯಾಡಿ
ಪಳಿವವರೊಳು ಪೋರುಗೊಳದೆ
ಮುಳುಗಿಯೆಚ್ವವರೊಳು ಮೂದಲೆಯೆಸಗದೆ
ಒಳುವೆಂಡಿರೊಳ್ಪುವಡೆವುದು

೪೦

ಕಂಡ ಕಂಡವರೊಳು ಕಡುದೈನ್ಯವಡೆಯದು
ದ್ದಂಡೆಯೆನಿಸಿ ತಾನಿರದೆ
ಗಂಡನ ಘನತೆಯೆಂತಂತು ಪೆರ್ಮೆಯ ಕೈ
ಕೊಂಡೆಸೆವುದು ಕೋವಿದೆಯರು

೪೧

ಕೇಣಗೊಂಡವರೆಂತು ಕೆಣಕಿ ನೋಡಲಿ ಮತ್ತೆ
ಮಾಣಲಿ ಮಮತೆಯುಳ್ಳವರು
ಊಣೆಯವಿಲ್ಲದಂತೊಳ್ನಡತೆಯೊಳಿದ್ದು
ಕಾಣಿಸುವುದು ಘನತೆಯನು

೪೨

ಬಸವಿಯರೊಳು ಪಾತಕಿನಿಯರೊಳು ಮ
ತ್ತಸತಿಯರೊಳು ಕೆಳೆಗೊಳದೆ
ಪೊಸತಿಲ ಪೊರಗಡಿಯಿಡದೊಳ್ವೆಂಡಿರ
ಜಸವಳ್ಳಿ ಜಗವ ಪರ್ಬುವುದು

೪೩

ಮಾಲೆಗಾತಿಯ ಮಡಿವಳತಿಯ ಕಣಿತಿಯ
ಸೂಲಗಿತ್ತಿಯ ಸೂಳೆಯನು
ಆಲೋಚನೆಗಂತರಂಗಕೆ ಬರಿಸದೆ
ಮೇಲರಿತಿಹುದು ಮೇರೆಯೊಳು

೪೪

ಬಸಿರಿಯ ಬಾಣಂತಿಯ ಬೇನೆವಡೆದರೆ
ಹಸುಮಕ್ಕಳ ಹಯನುಗಳು
ಬಸವಳಿಸದೆ ಬಳಲಿಸದೆ ಬಯ್ಯದೆ ಬಗೆ
ಯೊಸೆದುಚಿತದೊಳೋವುವುದು

೪೫

ನೀತಿ ವ‍ರ್ತನಗಳ ನಿಯಮಿಪ ಪಿರಿಯರ
ಮಾತುಗಳನು ಮನಗೊಳಿಸಿ
ಆ ತೆರದೊಳು ನಡೆದವನಿಯೊಳಧಿಕ ವಿ
ಖ್ಯಾತಿವಡೆವುದು ಕಾಂತೆಯರು

೪೬

ತಡೆಯದೆಳಮೆಯೊಳು ತಂದೆತಾಯಿಗಳಿಗೆ
ನಡುವರೆಯದೊಳು ನಲ್ಲನಿಗೆ
ಕಡುಮುದುಪಾದ ಕಾಲದೊಳು ತನ್ನಣುಗರಿ
ಗಡಕಮೆನಿಪುದಬಲೆಯರು

೪೭

ಈ ರೀತಿಯೊಳಿರ್ಪುದೇಕಪತ್ನಿಯರಿಗೆ
ನಾರಾಯಣನಾಜ್ಞೆಯೆಂದು
ಆರೈದು ತಿಳಿದಾಚರಿಪುದೊಡನೆ ಕೈ
ಸೇರುವುವಿಷ್ಟಸಿದ್ಧಿಗಳು

೪೮

ಅರಿತಾಚರಿಸಿಯಖಿಲ ಶಾಸ್ತ್ರತತ್ವವ
ನರಿಯದವರಿಗರಿಯಿಸುತ
ಮೆರೆವ ಸದ್ಗುರುಗಳ ಮೆಲ್ಲಡಿದಾವರೆ
ಗೆರಗಿ ಭಕ್ತಿಯನೆಸಗುವುದು

೪೯

ಕೀಳುದೇವತೆಗೆರಗದೆ ಕಿರಿಯರ ಮಾತ
ಕೇಳದೆ ಕೀಳಿಗಿಳಿಯದೆ
ಏಳುಲೋಕವ ಪೊಡೆಯೆಡೆಯೊಳಿಟ್ಟೋವುವ
ನಾಳುತನವನಾದರಿಪುದು

೫೦

ಚೆನ್ನಿಗ ಚಿಕದೇವರಾಯನ ಸಂಚಿಯ
ಹೊನ್ನಮ್ಮನುಸುರ್ದ ಕಬ್ಬದೊಳು
ಉನ್ನತಿವಡೆದೊಗೆದುದು ನಾಲ್ಕನೆಯ ಸಂಧಿ
ಸನ್ನುತ ಗುಣಸಂಬಂಧಿ

೫೧